

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಈ ಬಾರಿಯ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಬಲಾಬಲ ಪ್ರದರ್ಶನದಲ್ಲಿ ನಾರಿ ಶಕ್ತಿ ಎದ್ದು ಕಾಣುತ್ತಿದೆ. ಚುನಾವಣಾ ರ‌್ಯಾಲಿ, ಮನೆ ಮನೆ ಪ್ರಚಾರದಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು ಕಂಡುಬರುತ್ತಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆ ಲೋಕಸಮರ ಕಣ ರಂಗೇರುತ್ತಿದ್ದು, ಎರಡೂ ಕಡೆಯಲ್ಲಿ ಅಬ್ಬರ ಮತ ಪ್ರಚಾರ ಕಂಡುಬರುತ್ತಿದೆ. ಎರಡೂ ಕಡೆಯ ಅಭ್ಯರ್ಥಿಗಳು ಮಹಿಳೆಯರ ಮನಗೆಲ್ಲಲು ಆದ್ಯತೆ ನೀಡುತ್ತಿದ್ದು ಪ್ರಚಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನೇ ಕರೆತರುವ ಕಸರತ್ತು ನಡೆಸುತ್ತಿದ್ದಾರೆ.
ಖರ್ಚು ಕಡಿಮೆ: ಚುನಾವಣಾ ರ‌್ಯಾಲಿಗಳಿಗೆ, ಮನೆ ಮನೆ ಪ್ರಚಾರಕ್ಕೆ ಪುರುಷರನ್ನು ನಿಯೋಜಿಸಿದರೆ ಖರ್ಚು ಜಾಸ್ತಿ ಎಂಬುದು ಮತ್ತೊಂದು ಪ್ರಮುಖ ಕಾರಣವಾಗಿದೆ. ಚುನಾವಣಾ ಪ್ರಚಾರಕ್ಕೆ ಪುರುಷರನ್ನು ಕರೆತಂದರೆ ಅವರಿಗೆ ಏನಿಲ್ಲವೆಂದರೂ ತಲೆಗೆ ದಿನಕ್ಕೆ 500ರಿಂದ 1 ಸಾವಿರ ರೂ. ಕೊಡಬೇಕು. ಜತೆಗೆ ಉಪಹಾರ-ಊಟ, ಬೀಡಿ-ಸಿಗರೇಟಿನ ಖರ್ಚು ಜತೆಗೆ ಮದ್ಯ ಸೇವನೆಗೂ ಖರ್ಚು ಭರಿಸಬೇಕು ಎಂಬ ಪರಿಸ್ಥಿತಿ ಇದೆ. ಬೈಕ್, ಕಾರು ಮತ್ತಿತರ ಸ್ವಂತ ವಾಹನಗಳಲ್ಲಿ ಬರುತ್ತೇವೆ, ಇದಕ್ಕೆ ಪೆಟ್ರೋಲ್ ದರ ಹೆಚ್ಚಿಗೆ ಕೊಡಬೇಕು ಎಂಬ ಬೇಡಿಕೆ ಇರುತ್ತದೆ. ಆದರೆ ಮಹಿಳೆಯರನ್ನು ಕರೆತಂದರೆ ಇವೆಲ್ಲ ಖರ್ಚು ಉಳಿತಾಯವಾಗುತ್ತದೆ. ಮಹಿಳೆಯರಿಗೆ ತಲೆಗೆ 200ರೂ ಕೊಟ್ಟರೂ ಸಾಕು, ಯಾವುದೇ ಇನ್ನಿತರ ಬೇಡಿಕೆ ಇಡದೆ ಪ್ರಚಾರದಲ್ಲಿ ತೊಡಗುತ್ತಾರೆ. ಆಯಾ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಸಮೂಹ ಸಾರಿಗೆ ವ್ಯವಸ್ಥೆ ಮಾಡಿದರೆ ಸಾಕು, ಏನೊಂದೂ ಬೇಡಿಕೆ ಇಲ್ಲದೆ ಮಹಿಳೆಯರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ರಾಜಕೀಯ ಮುಖಂಡರ ಲೆಕ್ಕಾಚಾರವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಮತಪ್ರಚಾರದಲ್ಲಿ ಮಹಿಳೆಯರು ಕಂಡುಬರುತ್ತಿದ್ದಾರೆ.
ಕಾಂಗ್ರೆಸ್‌ನಲ್ಲೇ ಹೆಚ್ಚು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಆದ್ಯತೆ ಇರುವುದರಿಂದ ಕಾಂಗ್ರೆಸ್ ಪಾಳೆಯ ಹೆಚ್ಚಿನ ಮಟ್ಟದಲ್ಲಿ ಮಹಿಳಾ ಮತದಾರರ ಓಲೈಕೆಗೆ ಮುಂದಾಗಿದೆ. ಮತ ಪ್ರಚಾರದ ವೇಳೆ ಶಕ್ತಿ ಯೋಜನೆ, ಗೃಹಲಕ್ಷ್ಮಿ,ಅನ್ನಭಾಗ್ಯ ಯೋಜನೆಗಳ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಿ ಇದನ್ನೆ ಮತಗಳನ್ನಾಗಿ ಪರಿವರ್ತನೆಗೊಳಿಸುವುದು ಕಾಂಗ್ರೆಸ್ಸಿಗರ ಮುಖ್ಯ ಉದ್ದೇಶವಾಗಿದೆ. ಮಹಿಳಾ ಮತದಾರರನ್ನು ಸೆಳೆಯಲು ಮಹಿಳಾ ಕಾರ್ಯಕರ್ತೆಯರನ್ನೇ ಬಳಸುವುದು ಕಾಂಗ್ರೆಸ್‌ನವರ ಲೆಕ್ಕಾಚಾರ. ಇನ್ನೂ ಮೈತ್ರಿ ಪಕ್ಷದ ಅಭ್ಯರ್ಥಿಗಳು ಕಾಂಗ್ರೆಸ್ ಅಭ್ಯರ್ಥಿಗೆ ತಿರುಗೇಟು ನೀಡಲು ಇದೇ ತಂತ್ರದ ಮೊರೆ ಹೋಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತೆಯರನ್ನು ಕರೆತರುವಂತೆ ಮುಖಂಡರಿಗೆ ಸೂಚನೆ ರವಾನಿಸುತ್ತಿದ್ದಾರೆ. ಪ್ರತಿ ಗ್ರಾಮಮಟ್ಟದಲ್ಲಿ ಸ್ಥಳೀಯ ಮುಖಂಡರಿಗೆ ಇಂಥದ್ದೊಂದು ರ್ಮಾನು ಹೊರಡಿಸಿದ್ದು ಸ್ಥಳೀಯ ಮುಖಂಡರು ಮತಪ್ರಚಾರಕ್ಕೆ ಮಹಿಳೆಯರನ್ನು ಕರೆತರಲು ಯತ್ನಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.
ಕೂಲಿ ಕೆಲಸವಿಲ್ಲ ಮಳೆ ಕೊರತೆಯಿಂದ ತೀವ್ರ ಬರಗಾಲದ ಎದುರಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿವೆ. ಯಾವುದೇ ಕೆಲಸವಿಲ್ಲದೆ ಮಹಿಳೆಯರು ಬಿಡುವಾಗಿರುವುದರಿಂದ ಸ್ಥಳೀಯ ಮುಖಂಡರಿಗೆ ಇದು ಒಳ್ಳೆಯ ಅವಕಾಶವಾಗಿ ಕಂಡುಬರುತ್ತಿದೆ. ಮಹಿಳೆಯರನ್ನು ಮನವೊಲಿಸಿ ಪ್ರಚಾರಕ್ಕೆ ಕರೆತರಲು ಉತ್ಸುಕತೆ ತೋರಿಸುತ್ತಿದ್ದಾರೆ. ಮಹಿಳೆಯರೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಮುಖಂಡರೊಂದಿಗೆ ಹೆಜ್ಜೆ ಹಾಕುತ್ತಿದ್ದು ಲೋಕಸಮರ ಕಣ ಮಹಿಳೆಯರಿಂದ ಮತ್ತಷ್ಟು ರಂಗೇರುತ್ತಿದೆ.
ಮಳೆ ಕೊರತೆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ತುಂಬಾ ಬಿಡುವಾಗಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕರೆದ ತಕ್ಷಣ ಬರುತ್ತಿದ್ದಾರೆ. ಅವರವರ ಗ್ರಾಮದಿಂದಲೇ ಸಾರಿಗೆ ವಾಹನಗಳ ಮೂಲಕ ಕರೆತಂದು ಚುನಾವಣಾ ಪ್ರಚಾರ ಮುಗಿದ ಬಳಿಕ ವಾಪಸ್ ಸ್ವಸ್ಥಾನಕ್ಕೆ ಕಳುಹಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಮಹಿಳೆಯರು ಯಾವುದೇ ತಕರಾರಿಲ್ಲದೆ ಹೆಚ್ಚಿನ ಬೇಡಿಕೆ ಇಲ್ಲದೆ ಮತಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸುರೇಶ್‌ಕುಮಾರ್, ಮೈತ್ರಿ ಪಕ್ಷದ ಮುಖಂಡ, ದೇವನಹಳ್ಳಿ