

ಎಚ್.ಡಿ.ಕೋಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀ ಚಾಮುಂಡೇಶ್ವರಿ ಮಹಿಳಾ ಸಂಘಟನೆ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.
ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು, ದೇಶದಲ್ಲಿ ಮಹಿಳೆಯನ್ನು ಭಾರತಾಂಬೆ, ಭುವನೇಶ್ವರಿ ಸೇರಿದಂತೆ ದೇವಾನುದೇವತೆಗಳಿಗೆ ಹಾಗೂ ಪ್ರಕೃತಿಗೆ ಹೋಲಿಸುವ ಸುಸಂಸ್ಕೃತ ದೇಶದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತುಂಬಿದ ಸದನದಲ್ಲಿ ತೇಜೋವಧೆ ಮಾಡಿರುವುದರಿಂದ ವಿಧಾನ ಪರಿಷತ್ ಸದಸ್ಯತ್ವದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಹಿಳೆ ಎಂಬುದನ್ನು ಮರೆತ ಜವಾಬ್ದಾರಿ ಹುದ್ದೆ ಹೊಂದಿರುವ ಸಿ.ಟಿ.ರವಿ ಅವಾಚ್ಯ, ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ಜಸ್ಸಿಲಾ ಮಾತನಾಡಿದರು. ಸಾಂತ್ವನ ಕೇಂದ್ರದ ಕಾರ್ಯದರ್ಶಿ ರತ್ನಮ್ಮ ನರಸೇಗೌಡ, ಶೈಲಾ, ಅನುಷಾ, ಕವಿತಾ, ಪ್ರೇಮಾ, ದೇವಮ್ಮ, ಮಂಜುಳಾ , ಸ್ಫೂರ್ತಿ, ಚಿಕ್ಕದೇವಮ್ಮ, ಕುಮಾರಿ, ಭುವನೇಶ್ವರಿ ಇತರರು ಇದ್ದರು.