

ಮಂಡ್ಯ: ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಮತ್ತೆ ಶಿಫಾರಸು ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಮಹಿಳೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸರದಿ ಉಪವಾಸ ಮುಂದುವರೆದಿದ್ದು, ಮಂಡ್ಯದ ಅರ್ಕೇಶ್ವರ ನಗರದ ಪ್ರೇಮಾ, ಸ್ವರ್ಣಸಂದ್ರದ ಪದ್ಮಾವತಿ, ಮರೀಗೌಡ ಲೇಔಟ್‌ನ ಸುಜಾತಾ ಸಿದ್ದಯ್ಯ, ಗುತ್ತಲು ಬಡಾವಣೆಯ ತಾಯಮ್ಮ, ಕೊತ್ತತ್ತಿ ಗ್ರಾಮದ ನಾಗಮ್ಮ, ಬೆಳಗೊಳದ ದೇವಿರಮ್ಮ ಉಪವಾಸ ನಿರತರಾಗಿ ಕಾವೇರಿ ಹೋರಾಟ ಬೆಂಬಲಿಸಿದರು.
ಕಳೆದ ಮೂರುವರೆ ತಿಂಗಳಿನಿಂದ ನಿರಂತರವಾಗಿ ನೀರು ಹರಿಸಿ ಎನ್ನುತ್ತಲೇ ಇರುವ ಸಮಿತಿ, ಇದೀಗ ಜನವರಿ ತಿಂಗಳಿನಲ್ಲಿ ಪ್ರತಿದಿನ 1,030 ಕ್ಯೂಸೆಕ್, ಡಿಸೆಂಬರ್‌ನ ಉಳಿದ ದಿನಗಳಲ್ಲಿ ಪ್ರತಿದಿನ 3,128 ಕ್ಯೂಸೆಕ್ ನೀರು ಹರಿಸಬೇಕು ಎಂದು ಶಿಫಾರಸು ಮಾಡಿರುವುದು ಅವೈಜ್ಞಾನಿಕ. ರಾಜ್ಯದ ಕಾವೇರಿಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಪ್ರಸ್ತುತ ವರ್ಷ ಒಳಹರಿವು ಶೇ.52.84ರಷ್ಟು ಕಡಿಮೆಯಾಗಿದೆ. ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಾಗಾಗಿ ಅಲ್ಲಿನ ಬೆಳೆಗಳನ್ನು ಉಳಿಸಿಕೊಳ್ಳಲು ಯಾವುದೇ ತೊಂದರೆ ಆಗುವುದಿಲ್ಲ. ಸಾಂಬಾ ಬೆಳೆ ಕಟಾವು ಡಿಸೆಂಬರ್ ಮೊದಲ ವಾರದಲ್ಲೇ ಮುಗಿದಿದೆ, ಪರಿಸ್ಥಿತಿ ಈಗಿರುವಾಗ ಅವರಿಗೆ ನೀರಿನ ಅವಶ್ಯಕತೆ ಇಲ್ಲ. ಆದರೂ ಸಹ ಹಠಮಾರಿ ಧೋರಣೆ ಯಿಂದ ನೀರಿಗೆ ಬೇಡಿಕೆ ಇಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.
ಮೆಟ್ಟೂರು ಮತ್ತು ಭವಾನಿ ಸಾಗರ ಜಲಾಶಯಗಳಲ್ಲಿ 50.367 ಟಿಎಂಸಿ ಅಡಿ ನೀರಿದೆ. ತಮಿಳುನಾಡಿನ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ. ಆದರೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವು ಸ್ಥಗಿತಗೊಂಡಿದೆ. ಮುಂದಿನ ದಿನಗಳಲ್ಲಿ ಒಳಹರಿವಿನ ನಿರೀಕ್ಷೆ ಇಲ್ಲ. ಇಂತಹ ಸಂದರ್ಭದಲ್ಲಿ ನೆರೆ ರಾಜ್ಯಕ್ಕೆ ನಿರಂತರ ನೀರು ಹರಿಸಿದರೆ ಇಲ್ಲಿನ ಪರಿಸ್ಥಿತಿ ಯಾವ ರೀತಿ ಗಂಭೀರತೆ ಪಡೆಯಲಿದೆ ಎಂಬುದನ್ನ ರಾಜ್ಯ ಸರ್ಕಾರ ಅರಿಯಬೇಕು, ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಒತ್ತಾಯಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಕೆ.ಬೋರಯ್ಯ, ಕನ್ನಡಸೇನೆ ಮಂಜುನಾಥ್, ಜೈ ಕರ್ನಾಟಕ ಪರಿಷತ್‌ನ ಎಸ್.ನಾರಾಯಣ್ ಇತರರಿದ್ದರು.