

ಬೆಳಗಾವಿ: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಕೆಎಲ್‌ಇ ವೇಣುಧ್ವನಿ ರೇಡಿಯೋ ಕೇಂದ್ರದಿಂದ ಮಾರ್ಚ್ ಒಂದು ತಿಂಗಳ ಕಾಲ ಪ್ರತಿದಿನ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಸಮಾಜಕ್ಕೆ ಅವರ ಕೊಡುಗೆ ಪರಿಚಯಿಸಿರುವುದು ಶ್ಲಾಘನೀಯ ಎಂದು ಕೆಎಲ್‌ಇ ವಿಶ್ವ ವಿದ್ಯಾಲಯದ ಪರೀಕ್ಷಾ ನಿಯಂತ್ರಕಿ ಡಾ.ಚಂದ್ರಾ ಮೆಟಗುಡ್ಡ ಹೇಳಿದರು.
ಕೆಎಲ್‌ಇ ಸಂಸ್ಥೆಯ ವೇಣುಧ್ವನಿ 90.4 ಎಫ್‌ಎಂ ಕೇಂದ್ರದಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ಮಹಿಳಾ ದಿನವು ಲಿಂಗ ಸಮಾನತೆ, ಮಹಿಳೆಯರ ಹಕ್ಕು ಮತ್ತು ಮಹಿಳೆಯರ ಸುರಕ್ಷತೆ ಕುರಿತಾಗಿ ಹೆಚ್ಚು ಮಹತ್ವ ಹೊಂದಿದೆ. ಈ ನಿಟ್ಟಿನಲ್ಲಿ ಕೆಎಲ್‌ಇ ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರವು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಅನೇಕ ಕ್ಷೇತ್ರಗಳಲ್ಲಿಯ ಸಾಧನೆಗಳ ಕುರಿತು ಜಾಗೃತಿ ಮೂಡಿಸಲು ಇದು ಒಂದು ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆ ಸಂಗತಿ ಎಂದರು.
ಕೆಎಲ್‌ಇ ವೇಣುಧ್ವನಿ ಬಾನುಲಿ ಕೇಂದ್ರದ ನಿಲಯ ನಿರ್ವಾಹಕ ಡಾ.ವಿರೇಶಕುಮಾರ ನಂದಗಾಂವ ಮಾತನಾಡಿ, ಒಬ್ಬ ವ್ಯಕ್ತಿ ಜೀವನದಲ್ಲಿ ಮಹಿಳೆಯ ಪಾತ್ರ ಅನನ್ಯ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಇಂದಿನ ಆಧುನಿಕ ತಂತ್ರಜ್ಞಾನ ದಿನಗಳಲ್ಲಿ ಆಕೆ ಸಾಧನೆಯ ಶಿಖರ ಮುಟ್ಟುತ್ತಿದ್ದಾಳೆ ಎಂದು ಹೇಳಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಕೆಎಲ್‌ಇ ವೇಣುಧ್ವನಿ ಕೇಂದ್ರದ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿ, ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ.ಎಸ್., ಸಿಬ್ಬಂದಿ ಇದ್ದರು. ವೇಣುಧ್ವನಿ ಕಾರ್ಯಕ್ರಮ ನಿರ್ವಾಹಕ ಮಂಜುನಾಥ ಪೈ ಮತ್ತು ನಿಷಾ ಟಕ್ಕರ ನಿರೂಪಿಸಿದರು.