ಮಹಿಳಾ ಸಮಾನತೆ ಸಾರಿದ ವಾಕಥಾನ್: ಧಾನ್ ಫೌಂಡೇಶನ್ ವತಿಯಿಂದ ಆಯೋಜನೆ

12
Published on

ಮೈಸೂರು: ಧಾನ್ ಫೌಂಡೇಶನ್ ವತಿಯಿಂದ ‘ಹೊಸ ಸಾಮಾಜಿಕ ಕ್ರಮದ ಕಡೆಗೆ’ ವಿಷಯ ಕುರಿತು ಶನಿವಾರ ಆಯೋಜಿಸಿದ್ದ ವಾಕಥಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ವಾಕಥಾನ್, ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದವರೆಗೆ ನಡೆಯಿತು. ವಾಕಥಾನ್‌ನಲ್ಲಿ ನೂರಾರು ಮಹಿಳೆಯರು ಭಾಗವಹಿಸುವ ಮೂಲಕ ಮಹಿಳೆಯರಿಗೆ ಸಮಾನತೆ ನೀಡಿ ಎಂಬ ಸಂದೇಶ ಸಾರಿದರು.

ಮಹಿಳೆಯರು ವಾಕಥಾನ್ ಉದ್ದಕ್ಕೂ ‘ಕಾಡು ಬೆಳೆಸಿ, ನಾಡು ಉಳಿಸಿ’, ‘ನಮ್ಮ ಕಾಳಜಿ, ನಮ್ಮಯ ಹೆಮ್ಮೆ’, ‘ನಾರಿ ದೇಶಕ್ಕೆ ಮಾದರಿ’, ‘ಬಡತನ ನಿರ್ಮೂಲನೆ ನಮ್ಮ ನಿರ್ಣಯ’, ‘ಬಯಲು ಮುಕ್ತ ಸಮುದಾಯ, ಸುಭದ್ರ ಆರೋಗ್ಯಕ್ಕೆ ಅಡಿಪಾಯ’ ಹೀಗೆ ನಾನಾ ಫಲಕಗಳನ್ನು ಪ್ರದರ್ಶಿಸಿ ಅರಿವು ಮೂಡಿಸಿದರು. ಬಳಿಕ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನೆರವೇರಿತು.

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪ್ರಭು, ಲೀಡ್ ಬ್ಯಾಂಕ್ ಮ್ಯಾನೇಜರ್ ನಾಗೇಶ್, ಪ್ರಾದೇಶಿಕ ಸಂಯೋಜಕ ಶಂಕರ್ ಪ್ರಸಾದ್ ವಾಕಥಾನ್‌ಗೆ ಚಾಲನೆ ನೀಡಿದರು.

ಶಂಕರ್ ಪ್ರಸಾದ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಪಾತ್ರ ಎಷ್ಟಿದೆ, ಅವರ ಶ್ರಮ ಏನಿದೆ ಎಂಬುದನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವುದು ಹಾಗೂ ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸುವುದು ಇದರ ಉದ್ದೇಶ ಎಂದು ಹೇಳಿದರು.

ಜಾಗತೀಕರಣದ ಜಗತ್ತಿನಲ್ಲಿ ಮಹಿಳೆಯರ ಸಬಲೀಕರಣದ ಮೂಲಕ ಬಡತನ ನಿರ್ಮೂಲನೆ ಮಾಡಬೇಕಿದೆ. ಮಹಿಳೆಯರನ್ನು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಾಗೂ ಕಾನೂನು ಅರಿವು ನೀಡುವುದರ ಮೂಲಕ ಸಬಲೀಕರಣಗೊಳಿಸಿ, ಸಮಾಜದ ಮುಖ್ಯವಾಹಿನಿಗೆ ತರುವುದು ಯೋಜನೆಯ ಮುಖ್ಯ ಗುರಿ ಎಂದರು.

ಎಲ್‌ಐಸಿ ವ್ಯವಸ್ಥಾಪಕ ಎಚ್.ಆರ್.ಸತೀಶ್, ಫೌಂಡೇಶನ್ ಸಿಬ್ಬಂದಿ ನಾರಾಯಣ್ ಹೆಗಡೆ, ಹುಸೇನ್, ಮಂಜುನಾಥ್, ಪ್ರಭುಶಂಕರ್ ಭಾಗ್ಯಾ, ಜಯಲಕ್ಷ್ಮೀ, ಬ್ಯಾಂಕ್ ಆಫ್ ಬರೋಡ ಕ್ಷೇತ್ರಿಯ ಕಾರ್ಯಾಲಯದ ದೀಪಾ, ಬ್ಯಾಂಕ್ ಆಫ್ ಬರೋಡ ಹಿರಿಯ ಶಾಖಾ ಪ್ರಬಂಧಕ ಕೆ.ಸಂತೋಷ್ ಕುಮಾರ್, ಎಲ್‌ಐಸಿ ವ್ಯವಸ್ಥಾಪಕಿ ಟಿ.ವಿ.ಸುಜಾತಾ, ಅಭಿವೃದ್ಧಿ ಅಧಿಕಾರಿಗಳಾದ ಎಸ್.ಗೌರೀಶ್, ಕಿರಣ್, ಪೇರಿ ಶ್ರೀನಿವಾಸ್, ನೂತನ್, ರಾಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net