ಭಾನುವಾರ ಮಹಿಳಾ ದಸರಾ ಸಂಭ್ರಮ

Women's Dussehra celebration on Sunday
Published on

ಮಡಿಕೇರಿ:

ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಭಾನುವಾರ (ಅ.೨೨) ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿಸಲಾಗಿದೆ. ಬೆಳಗ್ಗೆ ೯.೩೦ ರಿಂದಲೇ ವಿವಿಧ ಸ್ಪಧೆಗಳನ್ನು ಮಹಿಳೆಯರಿಗೆ ಏರ್ಪಡಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೮ನೇ ವರ್ಷದ ಮಹಿಳಾ ದಸರಾ ಅಂಗವಾಗಿ ಎಥ್‌ನಿಕ್ ಫ್ಯಾಷನ್ ಶೋ, ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಗಾರ್ಭಾ ನೃತ್ಯ ಸ್ಪರ್ಧೆ, ೧೦೦ ಮೀಟರ್ ಓಟದ ಸ್ಪರ್ಧೆ , ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ , ಹಗ್ಗ ಜಗ್ಗಾಟ, ಮಚಾದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯುವುದು, ಬಕೆಟ್‌ಗೆ ಚೆಂಡು ಹಾಕುವುದು, ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವುದು, ಕೋಲಿಗೆ ರಿಂಗ್ ಹಾಕುವುದು, ನಿಧಾನವಾಗಿ ನಡೆಯುವುದು. ಸೂಜಿಗೆ ನೂಲು ಹಾಕುವುದು, ಬಾಂಬ್ ಇನ್ ಸಿಟಿ, ಚೆಂಡನ್ನು ವರ್ಗಾಯಿಸುವುದು, ನಿಧಾನವಾಗಿ ನಡೆಯುವುದು, ಮೆಹಂದಿ ಹಾಕುವುದು, ಸೀರೆಯ ನಿಖರ ಬೆಲೆ ಹೇಳುವುದು ಮತ್ತು ವಾಲಗ ನೃತ್ಯ ಸ್ಪರ್ಧೆಗಳು ನಡೆಯಲಿವೆ. ಮಹಿಳಾ ದಸರಾ ಸ್ಪರ್ಧಿಗಳು ಸ್ಥಳದಲ್ಲಿಯೇ ಬೆಳಗ್ಗೆ ೧೦.೩೦ ಗಂಟೆಯೊಳಗಾಗಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಇದೆ.

ಬೆಳಗ್ಗೆ ೧೦ ಗಂಟೆಗೆ ನಗರ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾರಾಕೇಶ್ ಅಧ್ಯಕ್ಷೆಯಲ್ಲಿ ನಡೆಯುವ ಮಹಿಳಾ ದಸರಾ ಕಾರ್ಯಕ್ರಮಗಳನ್ನು ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದಾರೆ. ಕೂಡಿಗೆ ಕ್ರೀಡಾಶಾಲೆಯ ನಿವೃತ್ತ ಪ್ರಾಂಶುಪಾಲರಾದ ಕುಂತಿಬೋಪಯ್ಯ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಸಮಾಜಸೇವಕರಾದ ದಿವ್ಯ ಮಂತರ್ ಗೌಡ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ನಗರಸಭೆಯ ನಿವೃತ್ತ ಪೌರಾಯುಕ್ತರಾದ ಪುಪ್ಪವತಿ, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ಅಪರ ಜಿಲ್ಲಾಧಿಕಾರಿ ಬಿ.ಎನ್. ವೀಣಾ, ನಗರಸಭೆಯ ಇಂಜಿನಯರ್ ಸೌಮ್ಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಎ.ಎಂ. ಬಸವರಾಜು, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ವೈ., ಖಜಾಂಜಿ ಅರುಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಂಜೆ ೬.೩೦ ಗಂಟೆಗೆ ಮಡಿಕೇರಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಮಹಿಳಾ ತಂಡಗಳಿಂದ ಸಾಂಸ್ಕೃತಿಕ ಕಾಯಕ್ರಮಗಳನ್ನು ಆಯೋಜಿಸಲಾಗಿದೆ. ಮೈಸೂರಿನ ಹೆಸರಾಂತ ಶುಭ ರಾಘವೇಂದ್ರ ತಂಡದಿಂದ ಸಂಗೀತ ಕಾರ್ಯಕ್ರಮ, ಮಡಿಕೇರಿಯ ಮಹಿಳಾ ವಕೀಲರ ತಂಡದ ನೃತ್ಯ, ಮಡಿಕೇರಿ ಕೊಡವ ಸಮಾಜ ಮಹಿಳಾ ತಂಡದಿಂದ ನೃತ್ಯ, ಕೊಡಗು ಗೌಡ ಮಹಿಳಾ ಒಕ್ಕೂಟ, ಹಿಂದೂ ಮಲಯಾಳಿ ಸಂಘ ಮಡಿಕೇರಿ, ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜ ಮಡಿಕೇರಿ, ಅಯ್ಯಪ್ಪ ಯುವತಿ ಮಂಡಳಿ ನರಿಯಂದಡ, ಹಿಂದೂ ಮಲಯಾಳಿ ಸಂಘ ಮೂರ್ನಾಡು ತಂಡಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net