

‘ಯಾರೇ ಕೈ ಬಿಟ್ಟರೂ ಭೂ ತಾಯಿ ಕೈ ಬಿಡುವುದಿಲ್ಲ’ ಎಂಬ ವಿಶ್ವಾಸದೊಂದಿಗೆ ಬೇಸಾಯ ಮಾಡಲು ಶುರು ಮಾಡಿ ಕೃಷಿಯಲ್ಲದೆ, ಓದಿನಲ್ಲೂ ಸಾಧನೆಗೈದ ಪುಟ್ಟಮ್ಮನ ಯಶೋಗಾಥೆ ಇದು.
ಸಾಲದ ಸುಳಿಗೆ ಸಿಲುಕಿ ಜೀವನ ಸಾಕು ಎಂದು ನಿರ್ಧರಿಸಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ತೊರೆಬೊಮ್ಮನಹಳ್ಳಿಯ ಪುಟ್ಟಮ್ಮ, ತಾನು ಬದುಕಲೇ ಬೇಕು ಎಂಬ ಆತ್ಮವಿಶ್ವಾಸದಿಂದ ಹಸು, ಮೇಕೆ ಸಾಕಣೆ ಮಾಡಿ ನೆಮ್ಮದಿಯ ಬದುಕು ಕಂಡುಕೊಂಡು ಇತರರಿಗೂ ಮಾದರಿಯಾಗಿದ್ದಾರೆ. ಮೊದಲಿಗೆ ಸ್ವಸಹಾಯ ಸಂಘದ ಮೂಲಕ ಸಾಲ ಪಡೆದು 3 ಹಸು ಖರೀದಿಸಿದ ಇವರಿಗೆ, ಆ ಹಸುಗಳೇ ಆದಾಯದ ಮೂಲವಾದವು.
ಜಮೀನಿನಲ್ಲಿ ಸೀಮೆ ಹುಲ್ಲು ಬೆಳೆದು ಹಸುಗಳನ್ನು ಸಾಕಿ, ಹಾಲು ಮಾರಿಕೊಂಡು ಸಂಪಾದನೆ ದಾರಿ ಕಂಡುಕೊಂಡ ಪುಟ್ಟಮ್ಮ, ಹಸುಗಳ ಜತೆಗೆ ಮೇಕೆಗಳನ್ನು ಸಾಕಲು ಶುರು ಮಾಡಿ ಲಾಭ ಗಳಿಸಿದರು. ಹಲವು ಸವಾಲುಗಳ ನಡುವೆ ಕೃಷಿ ಡಿಪ್ಲೊಮಾ ಮಾಡುವ ಛಲದೊಂದಿಗೆ ಓದಲಾರಂಭಿಸಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾದರು.
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ನ್ಯಾಷನಲ್ ಆಫ್ ಅಗ್ರಿಕಲ್ಚರಲ್ ಎಕ್ಸ್ಟೆನ್ಷನ್ ಮ್ಯಾನೇಜ್ವೆುಂಟ್ ಸಂಸ್ಥೆ ನಡೆಸುವ ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಎಕ್ಸ್ಟೆನ್ಷನ್ ವಿಷಯದಲ್ಲೂ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದರು. ಸಾವಯವ ಕೃಷಿ ಮಾಡುತ್ತ ಲಾಭ ಗಳಿಸುವ ಮಾರ್ಗ ಕಂಡುಕೊಂಡು ಹಸು, ಮೇಕೆಗಳ ಸಗಣಿ, ಒಣಗಿದ ಮರದ ಎಲೆಗಳಿಂದ ತೊಟ್ಟಿ ನಿರ್ವಹಿಸಿ ಅದನ್ನು ಪೈಪ್ ಮೂಲಕ ಜಮೀನಿಗೆ ಹಾಯಿಸಿ 3 ಎಕರೆಯಲ್ಲಿ ಬಗೆ ಬಗೆಯ ಸೊಪ್ಪು-ತರಕಾರಿ ಬೆಳೆದು ಸ್ವಂತ ವಾಹನದಲ್ಲಿ ಬೆಂಗಳೂರಿಗೆ ಕೊಂಡೊಯ್ದು ಲಕ್ಷಾಂತರ ರೂ. ಗಳಿಸುತ್ತಿದ್ದಾರೆ.
ಜತೆಗೆ ಶ್ರೀಕಂಠೇಶ್ವರ ಸ್ವಸಹಾಯ ಸಂಘ ಕಟ್ಟಿ ಮಹಿಳೆಯರಿಗೆ ಹೈನುಗಾರಿಕೆ, ರೇಷ್ಮೆ, ಹೊಲಿಗೆ ತರಬೇತಿ, ಗುಡಿ ಕೈಗಾರಿಕೆ ಮಾಡಲು ತರಬೇತಿ ನೀಡಿ, ಸ್ವಸಹಾಯ ಸಂಘಗಳಿಂದ ಸಾಲ ಕೊಡಿಸಿ ಮಾರ್ಗದರ್ಶಕರಾಗಿದ್ದಾರೆ. ಜೇನು ಸಾಕಣೆ, ರೇಷ್ಮೆಗೂಡಿನಲ್ಲಿ ಹಾರ ಮಾಡುವ ಕರಕುಶಲ ವಿಧಾನ ಕರಗತ ಮಾಡಿಕೊಂಡಿದ್ದಾರೆ.
ಹಲವಾರು ತರಬೇತಿಗಳಲ್ಲಿ ಭಾಗವಹಿಸುವ ಇವರು, ಇಂಡಿಯಾ ಇಂಟರ್ ನ್ಯಾಷನಲ್ ಟ್ರೆಡ್ ಫೇರ್(ಡೆಲ್ಲಿ), ಬೆಂಗಳೂರು ಆಕಾಶವಾಣಿ, ಮೈಸೂರು, ಮಂಡ್ಯ ಇನ್ನೂ ಹಲವು ಕಡೆಗಳಲ್ಲಿ ಕೃಷಿ ಸಂಬಂಧಿತ ವಿಷಯವಾಗಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈಜು, ಕರಾಟೆಯಲ್ಲೂ ಪುಟ್ಟಮ್ಮ ಪರಿಣತರು.