

ದೇವದಾಸಿ ಪದ್ಧತಿ ನಿಮೂಲನೆಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸಾಕಷ್ಟು ಪ್ರಯತ್ನಪಟ್ಟರೂ ಸಂಪೂರ್ಣ ನಿಮೂಲನೆ ಸಾಧ್ಯವಾಗಿಲ್ಲ. ಆದರೆ, ರಾಯಚೂರು ಜಿಲ್ಲೆಯ ಮೋಕ್ಷಮ್ಮ ಮಸ್ಕಿ, ತನಗೆ ಎದುರಾದ ಅವಮಾನಗಳನ್ನೂ ಲೆಕ್ಕಿಸದೆ, ಸಾವಿರಾರು ಮಹಿಳೆಯರನ್ನು ದೇವದಾಸಿ ಪದ್ಧತಿಯಿಂದ ವಿಮುಕ್ತಿಗೊಳಿಸಿ, ಅವರಿಗೆ ಬದುಕು ಕಲ್ಪಿಸುವ ಕೆಲಸ ಮಾಡಿದ್ದಾರೆ. ಈ ಅನಿಷ್ಟ ಪದ್ಧತಿ ವಿರುದ್ಧ ಹಿರೇನಗನೂರಿನ ಮೋಕ್ಷಮ್ಮ ಹೋರಾಟಕ್ಕಿಳಿದಾಗ ದೇವದಾಸಿಯರೇ ಇವರನ್ನು ಅವಮಾನಿಸಿದ ಪ್ರಸಂಗಗಳಿವೆ.
ಆದರೆ, ಅದ್ಯಾವುದಕ್ಕೂ ಎದೆಗುಂದದೆ ಹೋರಾಟ ಮುಂದುವರಿಸಿ ಯಶಸ್ಸು ಕಂಡಿದ್ದಾರೆ. ಬಡತನದ ಕುಟುಂಬದಲ್ಲಿ ಹುಟ್ಟಿದರೂ ಸಂಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು ಎನ್ನುವ ಅಭಿಲಾಷೆಯೊಂದಿಗೆ ‘ನವಜೀವನ ಮಹಿಳಾ ಒಕ್ಕೂಟ’ ರಚಿಸಿ, ಆ ಮೂಲಕ ರಾಯಚೂರು ಜಿಲ್ಲೆಯಲ್ಲಿನ ದೇವದಾಸಿಯರನ್ನು ಗುರುತಿಸಿ, ಅವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೋಕ್ಷಮ್ಮರ ಹೋರಾಟ ಫಲವಾಗಿ ದೇವದಾಸಿಯರಿಗೆ ರಾಜೀವ್ಗಾಂಧಿ ವಸತಿ ನಿಗಮದಿಂದ 306 ಮನೆ ಮಂಜೂರಾಗಿವೆೆ. ಸುಧಾಮೂರ್ತಿ ಅವರ ಇನ್ಪೋಸಿಸ್ ಫೌಂಡೇಷನ್ ಸಹಯೋಗದಲ್ಲಿ ದೇವದಾಸಿಯರಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಿ, ಸ್ವಾವಲಂಬಿಗಳಾಗುವಂತೆ ಮಾಡಿದ್ದಾರೆ. ದೇವದಾಸಿಯರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಕಾರದೊಂದಿಗೆ 200ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ.
ಸುಧಾಮೂರ್ತಿ ಅವರ ಮೂಲಕ ಹಲವಾರು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಕಲ್ಪಿಸುವಲ್ಲಿ ನೆರವಾಗಿದ್ದಾರೆ. ಮೈಸೂರಿನಲ್ಲಿ ಡಾ.ಪಾರ್ವತಮ್ಮ ರಾಜಕುಮಾರ್ ಸ್ಥಾಪಿಸಿರುವ ಶಕ್ತಿಧಾಮದಲ್ಲಿ ರಾಯಚೂರಿನ 120 ದೇವದಾಸಿ ಮತ್ತು ಅನಾಥ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದ್ದಾರೆ.
ಜತೆಗೆ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವ ನಿಟ್ಟಿನಲ್ಲಿ ಲಿಂಗಸುಗೂರಿನಲ್ಲಿ ‘ಸ್ವಾಭಿಮಾನಿ ಜನಪರ ವಿವಿಧೋದ್ದೇಶ ಸೌಹಾರ್ದ ಸಹಕಾರಿ’ ಸ್ಥಾಪಿಸಿ ಆ ಮೂಲಕ 6 ಕೋಟಿ ರೂ. ಉಳಿತಾಯ ಮಾಡಿದ್ದು, ಸಿಂಧನೂರು, ರಾಯಚೂರು, ಮಾನ್ವಿಯಲ್ಲಿ ಶಾಖೆಗಳನ್ನು ಆರಂಭಿಸಿದ್ದಾರೆ. ದೇವದಾಸಿ ಮಹಿಳೆಯರ ವಿಮುಕ್ತಿಗಾಗಿ ವಿವಿಧ ರಾಜ್ಯ ಹಾಗೂ ವಿದೇಶಗಳಲ್ಲೂ ವಿಚಾರ ಮಂಡನೆ ಮಾಡಿರುವ ಹೆಗ್ಗಳಿಕೆ ಇವರದು.