

ಭಟ್ಕಳ: ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಅದು ನಿತ್ಯ ನಿರಂತರವಾಗಿ ಸ್ತ್ರೀಯನ್ನು ಗೌರವಿಸುವ ಮೂಲಕ ಆಚರಣೆಯಾಗಬೇಕು ಎಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ನಿರ್ದೇಶಕಿ ಡಾ.ಪುಷ್ಪಲತಾ ಎಂ. ವೈದ್ಯ ಹೇಳಿದರು.
ಪಟ್ಟಣದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲೇಖಕಿ ರೇಣುಕಾ ರಮಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವಕರ್, ಇತರರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 17 ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
‘ನನ್ನೊಳಗಿನ ನಾನು ಸಂವಾದದಲ್ಲಿ ಸಂವಾದಕರಾಗಿ ಕುಮಟಾ ಕೆನರಾ ಬ್ಯಾಂಕ್ ನಿರ್ದೇಶಕ ರಾಜು ಕಲ್ಲಪ್ಪ ಭಾಗವಹಿಸಿದ್ದರು. ಮಹಿಳೆಯರು ಅನುಭವಿಸುವ ಸಾಮಾಜಿಕ, ಮಾನಸಿಕ, ಸಾಂಸಾರಿಕ ಮತ್ತು ಆರ್ಥಿಕ ಸಮಸ್ಯೆಗಳ ಕುರಿತು ಕುಮಟಾ ಡಯಟ್ ಉಪನ್ಯಾಸಕಿ ಶುಭಾ ನಾಯಕ, ಮಾನಸಿಕ ತಜ್ಞೆ ರೀನೆ ಪರ್ಟಾಡೋ, ಹೆರಿಗೆ ತಜ್ಞೆ ಡಾ. ಶಮ್ಸನೂರ್ ಖಾನ್ ಮಾಹಿತಿ ನೀಡಿದರು.
ಸ್ತ್ರಿ-ಸಂಭ್ರಮ 2025 ಶೀರ್ಷಿಕೆಯಡಿ ಪಾಲಕರು, ಪೋಷಕರು ಮತ್ತು ಶಿಕ್ಷಕಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಹಶಿಕ್ಷಕ ಗಣಪತಿ ನಾಯ್ಕ ಸಾಧಕರ ಸಾಧನೆ ತಿಳಿಸಿದರು. ಮುಖ್ಯೋಪಾಧ್ಯಾಯ ಗಣೇಶ ನಾಯ್ಕ, ಪ್ರಾಧ್ಯಾಪಕ ಸಂತೋಷ ಆಚಾರ್ಯ ಹಾಗೂ ಮಹೇಶ ನಾಯ್ಕ ನಿರ್ವಹಿಸಿದರು.