

ತುಮಕೂರು : ಕಾಯ್ದೆ, ಕಾನೂನುಗಳು ಮಹಿಳೆಯನ್ನು ರಕ್ಷಿಸಲು ಇರುತ್ತವೆಯಾದರೂ ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ತನ್ನನ್ನು ತಾನು ಕಾಪಾಡಿಕೊಳ್ಳುವಷ್ಟು ಬಲಿಷ್ಠಳಾಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಬಾಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಯಲು ಸಾಕಷ್ಟು ಕಾಯ್ದೆ, ಕಾನೂನುಗಳಿದ್ದರೂ ಮಹಿಳೆ ತನ್ನನ್ನು ತಾನು ಕಾಪಾಡಿಕೊಳ್ಳುವಷ್ಟು ಬಲಿಷ್ಠಳಾಗಬೇಕು, ವೇದ-ಪುರಾಣ, ವಚನಗಳ ಕಾಲದಿಂದಲೂ ಮಹಿಳೆಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದರೂ ಮಹಿಳಾ ಶೋಷಣೆ ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಸ್ವತಂತ್ರಳಾಗಬೇಕು ಎಂಬ ಹಿನ್ನೆಲೆಯಲ್ಲಿ ಮಹಿಳಾ ದಿನಾಚರಣೆ ಮಾಡಿಕೊಂಡು ಬರಲಾಗುತ್ತಿದೆ, ಮಹಿಳಾ ದಿನ ಆಚರಣೆಗೆ ಸೀಮಿತವಾಗದೆ, ರೂಢಿಗೆ ಬಂದಾಗ ಮಹಿಳೆಯರ ಅಭ್ಯುದಯ ಸಾಧ್ಯ. ನಾನು ಈ ಉನ್ನತ ಸ್ಥಾನಕ್ಕೇರಲು ನನ್ನ ತಾಯಿ, ಅಕ್ಕ-ತಂಗಿ, ಹೆಂಡತಿ, ಮಗಳ ಶ್ರಮವಿದೆ, ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವಂತೆ ಮಹಿಳೆಯ ಸಾಧನೆಗೆ ಮಹಿಳೆಯರ ಬೆಂಬಲವಿರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕಲ್ಪಿಸಿದ್ದು, ಯಾರೂ ಲಿಂಗ ತಾರತಮ್ಯ ಮಾಡಬಾರದು. ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆಯರ ಮೇಲಾಗುವ ಶೋಷಣೆ ತಡೆಯಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಚಾರ್ಯೆ ಡಾ.ರಜನಿ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಜಿಲ್ಲಾ ಕಾರಾಗೃಹ ಸಹಾಯಕ ಅಧೀಕ್ಷಕಿ ಶಾಂತಮ್ಮ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶಾಂತಕುಮಾರಿ ಮತ್ತಿತರರು ಇದ್ದರು.
ಶಾಲಾ-ಕಾಲೇಜು ತೊರೆದ ಹೆಣ್ಣು ಮಕ್ಕಳನ್ನು ಮತ್ತೆ ವಿದ್ಯಾವಂತರನ್ನಾಗಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಸ್ತ್ರೀ ಶಕ್ತಿ ಸಂಘಗಳ ಪಾತ್ರ ಮುಖ್ಯವಾಗಬೇಕು. ಅಪೌಷ್ಟಿಕತೆ, ಬಾಲ್ಯವಿವಾಹ ತಡೆಗಟ್ಟಲು ಪ್ರತಿಯೊಬ್ಬರು ರಾಯಭಾರಿಗಳಾಗಬೇಕು. ಅಂಗನವಾಡಿಯಿಂದ ಹೊರಗುಳಿದಿರುವ ಮಕ್ಕಳನ್ನು ಅಂಗನವಾಡಿಗೆ ಕರೆತರುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕು ಎಂದರು. ಜಿ.ಎಂ.ಗಂಗಾಧರಸ್ವಾಮಿ ಜಿಪಂ ಸಿಇಒ