ನಿರಾಶ್ರಿತರೊಂದಿಗೆ ಮಹಿಳಾ ದಿನ ಆಚರಣೆ: ತುಂಬಕೆರೆಯಲ್ಲಿ ಮಾರ್ಗದರ್ಶಿ ಟ್ರಸ್ಟ್‌ನಿಂದ ಆಯೋಜನೆ

Women's Day celebration in Tumbakere mandya
Published on

ಮಂಡ್ಯ: ತಾಲೂಕಿನ ತುಂಬಕೆರೆ ಗ್ರಾಮದ ನಿರಾಶ್ರಿತರ ಕಾಲನಿಯಲ್ಲಿ ಮಾರ್ಗದರ್ಶಿ ಟ್ರಸ್ಟ್‌ನಿಂದ ಮಹಿಳಾ ದಿನವನ್ನು ವಿಶೇಷ ಆಚರಣೆ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಗ್ರಂಥಪಾಲಕಿ ಪ್ರಮೀಳಾ ಮಾತನಾಡಿ, ಮಹಿಳೆಯರು ಇಂದೇನಾದರೂ ವಿದ್ಯಾವಂತರಾಗಿ ಅವರಿಗೆ ದುಡಿಯುವ ಶಕ್ತಿ ಬಂದಿದ್ದರೆ ಅದಕ್ಕೆ ಅಂಬೇಡ್ಕರ್, ಸಾವಿತ್ರಿ ಬಾಯಿಫುಲೆ ಕಾರಣ. ಅವರು ಅಂದು ವಿದ್ಯೆ, ಮೀಸಲಾತಿ ನೀಡದಿದ್ದರೆ ನನ್ನಂತ ಮಹಿಳೆಯರು ನಾಲ್ಕು ಗೋಡೆ ಮಧ್ಯದಲ್ಲಿರಬೇಕಾಗುತ್ತಿತ್ತು ಎಂದರು.

ಪತ್ರಕರ್ತ ದ.ಕೋ ಹಳ್ಳಿ ಚಂದ್ರಶೇಖರ್ ಮಾತನಾಡಿ, ಮಹಿಳೆ ದೈಹಿಕವಾಗಿ ಪುರುಷರಿಗಿಂತ ದುರ್ಬಲರಾಗಿರಬಹುದು. ಆದರೆ ಮಾನಸಿಕವಾಗಿ ಆಕೆ ಪುರುಷರಿಗಿಂತ ಪ್ರಬಲಳಾಗಿದ್ದಾಳೆ. ಆದ್ದರಿಂದಲೇ ಆಕೆಗೆ ಕುಟುಂಬ ನಿಬಾಯಿಸುವ ಜತೆಗೆ ದೇಶವನ್ನೂ ಆಳುವ ಶಕ್ತಿ ಬಂದಿದೆ ಎಂದರು.

ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಮಾತನಾಡಿ, ಇಲ್ಲಿನ ನಿರಾಶ್ರಿತರು ಮೂಲ ಸೌಕರ್ಯಗಳಿಲ್ಲದೇ ಬದುಕುತ್ತಿದ್ದಾರೆ. ಜಿಲ್ಲಾಡಳಿತ ಇತ್ತ ಗಮನಹರಿಸಿ ಸವಲತ್ತು ದೊರಕಿಸಿಕೊಡುವ ಔದಾರ್ಯತೆ ತೋರಬೇಕು ಎಂದು ಒತ್ತಾಯಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪರಸ್ಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಿ.ದೇವರಾಜ್ ಕೊಪ್ಪ ಮಾತನಾಡಿ, ಭೂಮಿ ಮತ್ತು ಹೆಣ್ಣಿಗೆ ಸೃಷ್ಟಿಸುವ ಶಕ್ತಿಯಿದೆ. ಜಗತ್ತಿನ ಯಾವುದೇ ವಸ್ತು ಭೂಮಿಯ ಸೃಷ್ಟಿಯ ಹೊರತಾಗಿಲ್ಲ ಆದ್ದರಿಂದಲೇ ಭೂಮಿ ಮತ್ತು ಹೆಣ್ಣನ್ನು ತಾಯಿಗೆ ಹೋಲಿಕೆ ಮಾಡುತ್ತಾರೆ ಎಂದರು.

ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ.ಕುಮಾರಸ್ವಾಮಿ ಸಾಕ್ಯ, ವಕೀಲ ಎಚ್.ಎನ್.ನರಸಿಂಹಮೂರ್ತಿ, ಮಂಡ್ಯ ವಿವಿ ಅಧ್ಯಾಪಕ ಡಾ.ಗಣೇಶ್, ಮಾರ್ಗದರ್ಶಿ ಟ್ರಸ್ಟ್ ಅಧ್ಯಕ್ಷ ಕೆ.ಸಿ.ಲೋಕೇಶ್, ಅರುವಿ ಟ್ರಸ್ಟ್ ಅಧ್ಯಕ್ಷೆ ಅರುಣಾ ಈಶ್ವರ್, ಸಿ.ಶಶಿಕಲಾ, ಎನ್.ಕೆ. ಸೌಮ್ಯ, ಕಾಳಪ್ಪ ಇತರರಿದ್ದರು.

ಇದೇ ವೇಳೆ ಕಲಾವಿದೆ ಆಲದಹಳ್ಳಿ ಮಂಜುಳಾ, ಕ್ರೀಡಾ ಸಾಧಕಿ ಮಾನ್ಯಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಾಯಕರಾದ ಹುರುಗಲವಾಡಿ ರಾಮಯ್ಯ, ಹನಿಯಂಬಾಡಿ ಶೇಖರ್, ವೈರಮುಡಿ ಪರಿವರ್ತನಾ ಗೀತೆಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net