

ಚಳ್ಳಕೆರೆ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಪ್ರತಿಪಾದಿಸಿದಂತೆ ಸಮಾಜದಲ್ಲಿ ಹೆಣ್ಣು-ಗಂಡು ಸಮಾನ ಎನ್ನುವ ಜಾಗೃತಿ ಸಮಾಜದಲ್ಲಿ ಬೆಳೆಯಬೇಕಿದೆ ಎಂದು ಬನಶ್ರೀ ವೃದ್ಧಾಶ್ರಮದ ಸಂಸ್ಥಾಪಕಿ ಎಸ್. ಮಂಜುಳಮ್ಮ ಹೇಳಿದರು.
ನಗರದ ಹೆಗ್ಗೆರೆ ತಾಯಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮಹಿಳೆ ಅಡುಗೆ ಮನೆಗೆ ಸೀಮಿತವಲ್ಲ. ಕುಟುಂಬ ನಿರ್ವಹಣೆ ಜಾಣ್ಮೆ ಇರುವ ಮಹಿಳೆ ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ಸಾಧಕ ಮಹಿಳೆಯರಿಂದ ಪ್ರೇರಣೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕುಟುಂಬದ ಸಮಸ್ಯೆಯಿಂದ ಚಿಕ್ಕ ವಯಸ್ಸಿಗೆ ನನಗೆ ಮದುವೆ ಮಾಡಲಾಯಿತು. ಹಿರಿಯರ ಅನುಮತಿ ಪಡೆದು ಶಿಕ್ಷಣ ಮುಂದುವರಿಸಿದೆ. ಮಗಳ ಜತೆಗೆ ಎಸ್ಸೆಸ್ಸೆಲ್ಸಿ ಪಾಸಾಗಿ, ಟಿಸಿಎಚ್ ತರಬೇತಿ ಪಡೆದು 30 ವರ್ಷ ಸರ್ಕಾರಿ ಶಿಕ್ಷಕಿಯಾಗಿ ಸೇವೆ ಮಾಡಿದ್ದೇನೆ. ವೃತ್ತಿ ಜತೆಗೆ ಎಂ.ಎ, ಎಲ್ಎಲ್ಬಿ ಪದವಿಗಳನ್ನು ಪಡೆದಿದ್ದೇನೆ. ಪ್ರಸ್ತುತ ಪಿಎಚ್ಡಿ ಅಧ್ಯಯನ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ನಿವೃತ್ತಿ ಬಳಿಕ ಬಂದ 30 ಲಕ್ಷ ರೂ.ಗಳಲ್ಲಿ ವೃದ್ಧಾಶ್ರಮ ಸ್ಥಾಪಿಸಿ 30 ವಯೋವೃದ್ಧರನ್ನು ಹಾರೈಕೆ ಮಾಡುತ್ತಿದ್ದೇನೆ. ಯಾವ ಸಂದರ್ಭದಲ್ಲೂ ಮಹಿಳೆ ಅಬಲೆ ಎನ್ನುವ ಮನಸ್ಥಿತಿ ಬೆಳೆಸಿಕೊಳ್ಳಬಾರದು. ಸದಾ ಸಮಾಜಮುಖಿಯಾಗಿ, ಸಮಾಜಕ್ಕೆ ಮಾದರಿಯಾಗಿ ಬದುಕು ರೂಪಿಸಿಕೊಳ್ಳುವ ಕಡೆ ತುಡಿತವಿರಬೇಕು ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕ ಎ. ವೀರಣ್ಣ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯರೂ ಸಾಧನೆ ಮಾಡಿದ್ದಾರೆ. ವೀರ ಮಹಿಳೆಯರಾದ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ ಮತ್ತಿತರ ಬದುಕಿನ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು. ಮಹಿಳೆಯರ ಸಬಲೀಕರಣಕ್ಕೆ ಇರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣದ ಮೂಲಕ ಉತ್ತಮ ಜೀವನ ರೂಪಿಸಿಕೊಂಡು ಕುಟುಂಬ ಮತ್ತು ಸಮಾಜಕ್ಕೆ ಕೀರ್ತಿ ತರುವತ್ತ ಸಾಗಬೇಕು ಎಂದು ತಿಳಿಸಿದರು.
ನ್ಯಾಯವಾದಿ ಬೆಳಗೆರೆ ಪೆನ್ನಯ್ಯ, ಶಿಕ್ಷಕರಾದ ಪ್ರಾಣೇಶ್, ಬಿ. ರಾಜ್ಕುಮಾರ್, ಶಿವಣ್ಣ, ಬಿ.ಎಲ್. ಉಮಾ, ವೇಣಿ, ಸುಜಾತ, ಸುಶೀಲಮ್ಮ, ನಾಗರತ್ನ ಮತ್ತಿತರರಿದ್ದರು.