ಆರ್ಥಿಕ ಪ್ರಗತಿಗೆ ಮಹಿಳೆಯರ ಕೊಡುಗೆ ಅಪಾರ

18arsph1ep
Published on


ಅರಸೀಕೆರೆ : ದೇಶದ ಆರ್ಥಿಕ ವ್ಯವಸ್ಥೆ ಬಲಿಷ್ಠಗೊಳ್ಳಲು ಮಹಿಳಾ ಶಕ್ತಿಯ ಕೊಡುಗೆ ಅಪಾರ ಎಂದು ಹಾಸನ ವಿವಿ ಸಿಂಡಿಕೇಟ್ ಸದಸ್ಯ ಡಾ.ಎಸ್.ನಾರಾಯಣ್ ಹೇಳಿದರು. ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಹಾಗೂ ಸಹೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜಕೀಯ, ಶೈಕ್ಷಣಿಕ,ಆರ್ಥವ್ಯವಸ್ಥೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ತನ್ನ ಛಾಪು ಮೂಡಿಸುವ ಮೂಲಕ ಮುನ್ನೆಲೆಗೆ ಬಂದಿರುವುದು ಆಶಾದಾಯಕ ಬೆಳವಣಿಗೆ. ಕೈಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ. ತನ್ಮೂಲಕ ಸರ್ವರಂಗಗಳಲ್ಲಿಯೂ ನಾರಿ ಶಕ್ತಿಯ ಪ್ರಾಮುಖ್ಯತೆಯನ್ನು ಸಾಬೀತು ಪಡಿಸಿದ್ದಾರೆ ಎಂದು ಬಣ್ಣಿಸಿದರು.
ಸಮಾಜ ಸೇವಕಿ ಕಾಂಚನ ಮಾಲಾ ಮಾತನಾಡಿ, ಜ್ಞಾನ ವಿಜ್ಞಾನ, ತಂತ್ರಜ್ಞಾನದ ಸದ್ಭಳಕೆಯಿಂದ ಮನುಷ್ಯ ವಿಕಾಸದೆಡೆಗೆ ಸಾಗಬೇಕೇ ವಿನಹಃ ವಿನಾಶದೆಡೆಗಲ್ಲ ಎಂದರು.
ಸರಳವಾದ ಬದುಕಿನಿಂದ ಸುಂದರವಾದ ಜೀವನ ನಡೆಸಲು ಸಾಧ್ಯವಿದೆ ಎನ್ನುವುದನ್ನು ಎಲ್ಲರೂ ಮನಗಂಡಾಗ ಮಾತ್ರವೇ ಜೀವನ ಸುಖಮಯವಾಗಲಿದೆ ಎಂದರು. ಸಹೋದರಿ ನಿವೇದಿತಾ ಪ್ರತಿಷ್ಠಾನದ ರಾಜ್ಯ ಸಂಚಾಲಕಿ ಶ್ರೀನಿಧಿ ದೇಶಪಾಂಡೆ, ತಾಲೂಕು ಅಧ್ಯಕ್ಷೆ ಶಾರದಾ ಜವಳಿ, ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಪ್ರೊ.ಉಷಾ ಇನ್ನಿತರರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net