ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಸರ್ವಶಕ್ತಳಾದರೆ ಸುಂದರ ಸಮಾಜ ನಿರ್ಮಿಸಲು ಸಾಧ್ಯ

8-klr-1
Published on

ಕೋಲಾರ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಶಕ್ತರಾದರೆ ಉತ್ತಮವಾದ ದೇಶ, ರಾಜ್ಯದ ಜತೆಗೆ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಪ್ರಧಾನ ಮಂತ್ರಿ ಮಾತೃವಂದನ ಯೋಜನೆಯ ಜಿಲ್ಲಾಮಟ್ಟದ ಸಮಾರೋಪ ಸಮಾರಂಭ ಹಾಗೂ ಪೋಷಣ್ ಪಕ್ವಾಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಕಲ್ಯಾಣಕ್ಕೆ ಮಾತೃವಂದನ, ಭೇಟಿ ಬಚಾವೋ ಭೇಟಿ ಪಡಾವೋ, ಪೋಷಣ್ ಪಕ್ವಾಡ್ ಅಭಿಯಾನದಲ್ಲಿ ಪೌಷ್ಠಿಕತೆ ಹೆಚ್ಚಿಸಲು ಕಾರ್ಯಕ್ರಮ ರೂಪಿಸಿದೆ. ಮುಸ್ಲಿಂ ಮಹಿಳೆಯರು ಎದುರಿಸುತ್ತಿದ್ದ ಸಂಕಷ್ಟ ಅರಿತು ತ್ರಿವಳಿ ತಲಾಖ್ ರದ್ದುಪಡಿಸಿದ್ದರಿಂದ ಮಹಿಳೆಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಇಂದಿರಾಗಾಂಧಿ ಪ್ರಧಾನಿಯಾಗಿ ದೇಶ ಆಳಿದ್ದರು. ಮಹಿಳೆಯರು ಆ ಧೈರ್ಯ, ಸ್ಥೈರ್ಯ ಬೆಳೆಸಿಕೊಂಡು ಸರ್ಕಾರದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದರು.

ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆ ಅನುಷ್ಠಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪ್ರಾಮಾಣಿಕತೆ ಸಾಬೀತು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕಾನೂನು ಕಾಲೇಜು ಸಹಾಯಕ ಪ್ರಾಧ್ಯಾಪಕಿ ಪ್ರಸನ್ನಕುಮಾರಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಮೊದಲ ಸ್ತ್ರೀವಾದಿ. ದೇಶದಲ್ಲಿ ಹೆಣ್ಣು ಮಕ್ಕಳ ಪರ ಕಾನೂನುಗಳಿದ್ದರೂ ದೌರ್ಜನ್ಯ, ಶೋಷಣೆಗೆ ಒಳಗಾಗುತ್ತಿದ್ದಾರೆ. ಕಾಯ್ದೆ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಸತ್‌ನಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ನೀಡುವ ಕಾಯ್ದೆ ಜಾರಿಗೆ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಮಹಿಳೆಯರು ಗರ್ಭ ಧರಿಸಿದ ಸಂದರ್ಭದಲ್ಲಿ ಲಿಂಗ ಪತ್ತೆ ಹಚ್ಚುವ ಕೆಲಸ ನಸಿರ್ಂಗ್ ಹೋಂಗಳಲ್ಲಿ ನಡೆಯುತ್ತಿದೆ. ಗಡಿ ಜಿಲ್ಲೆಗಳಲ್ಲಿ ಇದರ ಸಂಖ್ಯೆ ಹೆಚ್ಚಿದೆ. ಗಂಡು-ಹೆಣ್ಣು ಸಮಾನರಾದರೂ ಇನ್ನೂ ಬದಲಾಗದ ಮನಸ್ಸುಗಳಿವೆ. ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಯಿಸಿ ಸಮಾನತೆಯ ಕನ್ನಡಕದಲ್ಲಿ ಸಮಾಜವನ್ನು ನೋಡಬೇಕು ಎಂದರು.

ಜೆಎಂಎಸ್ ಉಪಾಧ್ಯಕ್ಷೆ ವಿ. ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಂಜಿ ಪಾಲಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ತುಳಸಿರಾಂ, ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಿಕ್ಕಣ್ಣ, ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಸೀಶಕ್ತಿ ಒಕ್ಕೂಟದ ಅಧ್ಯಕ್ಷೆ ನಳಿನಿ, ಸಿಡಿಪಿಒಗಳಾದ ಎಂ.ರಮೇಶ್. ಮುನಿರಾಜು. ವಂಶಿ ಕೃಷ್ಣ, ರೋಸಲಿನ್ ಸತ್ಯ. ಪ್ರಭಾವತಿ, ಜಯದೇವಿ, ಶೀಲ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇ.ರವಿಕುಮಾರ್ ಹಾಜರಿದ್ದರು.

ಸಾಧಕಿಯರಿಗೆ ಸನ್ಮಾನ: ಗರ್ಭಿಣಿಗೆ ಸೀಮಂತ, ಮಗುವಿಗೆ ಅನ್ನಪ್ರಾಶನ ಮಾಡಲಾಯಿತು. ಜಿಲ್ಲಾಮಟ್ಟದಲ್ಲಿ ಉತ್ತಮ ಮಹಿಳಾ ಸಂಘವಾಗಿ ಶ್ರೀನಿವಾಸಪುರದ ಗುಂಡಮನತ್ತ ಗಂಗಮ್ಮ ಮಹಿಳಾ ಸಂಘ, ತಾಲೂಕು ಮಟ್ಟದಲ್ಲಿ ಆಯ್ಕೆಯಾದ ಸಂಘಗಳು ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾಯಕರ್ತೆ, ಸಹಾಯಕಿಯರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net