

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಹೆಣ್ಣನ್ನು ಅನ್ನಪೂರ್ಣೇಶ್ವರಿ, ಚಾಮುಂಡೇಶ್ವರಿ, ವನದೇವತೆ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಿದ್ದು, ದೇವತೆಯ ಮತ್ತೊಂದು ರೂಪವೇ ಹೆಣ್ಣು ಎಂದು ಬಿಜೆಪಿ ಎಸ್‌ಟಿ ಮೋರ್ಚಾ ತಾಲೂಕು ಅಧ್ಯಕ್ಷ ಕೆಂಪರಾಮಯ್ಯ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯ ಎಂ.ಎಸ್.ರಾಮಯ್ಯ ಬಡಾವಣೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸ್ವಸಹಾಯ ಸಂಘ ಹಾಗೂ ವರಲಕ್ಷ್ಮೀ ಸ್ವಸಹಾಯ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಸಮಾಜದಲ್ಲಿ ಹೆಣ್ಣಿಗೆ ಒಂದು ವಿಶೇಷ ಸ್ಥಾನಮಾನವಿದೆ. ಹೆಣ್ಣು ಈ ಜಗದ ಕಣ್ಣು ಎನ್ನುತ್ತಾರೆ. ಸಮಾಜದಲ್ಲಿ ಮಹಿಳೆಯ ಪಾತ್ರ ಅನನ್ಯ. ತಾಯಿಯಾಗಿ, ತಂಗಿಯಾಗಿ, ಮಡದಿಯಾಗಿ ಹೆಣ್ಣು ಸಕಲರಾಶಿಗಳ ಅಧಿದೇವತೆಯಾಗಿ ಪ್ರಥಮ ಸ್ಥಾನಗಳಿಸಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಅತ್ಯಂತ ಗೌರವಯುತವಾಗಿ ಕಾಣಬೇಕಿದೆ. ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಅರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಇಡೀ ಕುಟುಂಬವನ್ನು ನಿಬಾಹಿಸುತ್ತಿದ್ದ ಹೆಣ್ಣು ಎಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ವಿಶೇಷ ಛಾಪು ಮೂಡಿದ್ದಾರೆ ಎಂದರು.
ವಕೀಲ ದೀಲಿಪ್‌ಕುಮಾರ್ ಮಾತನಾಡಿ, ಈ ಹಿಂದೆ ಹೆಣ್ಣು ಎಂದರೆ ನೋಡುವ ದೃಷ್ಟಿಯೇ ಬೇರೆ ಇತ್ತು. ಕಾಲ ಬದಲಾದಂತೆಲ್ಲಾ ಹೆಣ್ಣು ಪುರುಷನಿಗೆ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಂತೆ ಸಾಧನೆಯ ಮೆಟ್ಟಿಲು ತುಳಿದು ಪ್ರಜ್ವಲಿಸುತ್ತಿದ್ದಾಳೆ. ಅದರಂತೆ ಮಹಿಳೆಯರನ್ನು ನೋಡುವ ದೃಷ್ಟಿ ಬದಲಾಗಿದ್ದು, ಗಂಡಸರು ಆಕೆಯ ವ್ಯಕ್ತಿತ್ವಕ್ಕೆ ಸಾಧನೆಗೆ ಬೆಲೆ ನೀಡುತ್ತಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಮಹಿಳೆಯರು ಸಿಕ್ಕ ಅವಕಾಶವನ್ನು ಸದುಯೋಗ ಪಡಿಸಿಕೊಂಡು ರಾಜಕೀಯವಾಗಿ ಮತ್ತಷ್ಟು ಸಾಧನೆ ಮಾಡಬೇಕಿದೆ ಎಂದರು.