ಮಹಿಳಾ ಕ್ರಿಕೆಟ್: ಪ್ಯಾಂಥರ್ಸ್‌ ಕ್ಲಬ್ ಕೊಡಗು ಚಾಂಪಿಯನ್

womens cricket
Published on

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ವತಿಯಿಂದ ೨೫ನೇ ವರ್ಷದ ಗೌಡ ಕ್ರೀಡಾಕೂಟದ ಬೆಳ್ಳಿಹಬ್ಬದ ಸಂಭ್ರಮದ ಪ್ರಯುಕ್ತ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ ೪ಓವರ್‌ನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಪ್ಯಾಂಥರ್ಸ್‌ ಕ್ಲಬ್ ಕೊಡಗು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.


ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ೧೦ ಕುಟುಂಬ ೧೮ ಗೋತ್ರದ ಮುಕ್ತ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, ಮಹಿಳೆಯರು ತಮ್ಮದೇ ತಂಡವನ್ನು ರಚಿಸಿಕೊಂಡು ವಯಸ್ಸಿನ ಮಿತಿ ಇಲ್ಲದೆ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಬಿಸಿಲನ್ನೂ ಲೆಕ್ಕಿಸದೆ ಆಟವಾಡಿ, ಎದ್ದು ಬಿದ್ದು ತಂಡದ ಗೆಲುವಿಗಾಗಿ ಶ್ರಮಿಸಿದರು. ಪಂದ್ಯಾಟದಲ್ಲಿ ೧೧ ಪ್ರಾಂಚೈಸಿಗಳು ಪಾಲ್ಗೊಂಡಿತ್ತು.


ಫೈನಲ್ ಪಂದ್ಯಾಟದಲ್ಲಿ ಟಾಸ್ ಸೋತ ಪ್ಯಾಂಥರ್ ಕ್ಲಬ್ ಕೊಡಗು ತಂಡ ನಿಗದಿತ ೪ ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ ೪೯ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಬ್ಲ್ಯಾಕ್ ಪ್ಯಾಂಥರ್ಸ್‌ ತಂಡ ೨ ವಿಕೆಟ್ ಕಳೆದುಕೊಂಡು ೪೨ ರನ್ ಗಳಿಸಿ ೭ರನ್ ಅಂತರದಲ್ಲಿ ಸೋಲುಂಡಿತ್ತು. ಪರಿಣಾಮ ಪ್ಯಾಂಥರ್ಸ್‌ ಕ್ಲಬ್ ಕೊಡಗು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.


ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ೪ ತಂಡಗಳು ಸೆಮಿಫೈನಲ್ ಪ್ರವೇಶ ಪಡೆಯಿತು. ಮೊದಲ ಸೆಮಿಫೈನಲ್‌ನಲ್ಲಿ ಟಾಸ್ ಗೆದ್ದ ದಿ ಎಲೈಟ್ ವುಮೆನ್ ಬೆಂಗಳೂರು ತಂಡ ನಿಗದಿತ ೪ ಓವರ್‌ನಲ್ಲಿ ೨ ವಿಕೆಟ್ ನಷ್ಟಕ್ಕೆ ೩೬ರನ್ ಗಳಿಸಿತು. ತಂಡದ ಪರ ತನಿಸ್ಕಾ ಜೈನಿರ ೧೦, ಲೀನಾ ೧೪ರನ್ ಕಲೆ ಹಾಕಿದರು. ಗುರಿಬೆನ್ನಟ್ಟಿದ ಬ್ಲ್ಯಾಕ್ ಪ್ಯಾಂಥರ್ ೩.೧ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ತಂಡದ ಪರ ಕೌಶಲ್ಯ ಭರತ್ ೯ ಎಸೆತದಲ್ಲಿ ೧೮ ರನ್ ದಾಖಲಿಸಿ ತಂಡದ ಗೆಲುವಿಗೆ ಶ್ರಮಿಸಿದರು.


೨ನೇ ಸೆಮಿಫೈನಲ್‌ನಲ್ಲಿ ಪ್ಯಾಂಥರ್ಸ್‌ ಕ್ಲಬ್ ಕೊಡಗು ತಂಡ ವಿಕೆಟ್ ನಷ್ಟವಿಲ್ಲದೇ ೯೫ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ತಂಡದ ಪರ ತಾನ್ಯ ೧೪ ಎಸೆತದಲ್ಲಿ ೮ ಸಿಕ್ಸರ್, ೧ ಬೌಂಡರಿ ನೆರವಿನೊಂದಿಗೆ ಆಕರ್ಷಕ ಅರ್ಧಶತಕ ಬಾರಿಸಿದರೆ, ವರ್ಣಶ್ರೀ ೧೨ ಎಸೆತದಲ್ಲಿ ೩೩ ರನ್ ದಾಖಲಿಸಿ ತಂಡದ ಮೊತ್ತವನ್ನು ಏರಿಸುವಲ್ಲಿ ಸಫಲರಾದರು. ಗುರಿ ಬೆನ್ನಟ್ಟಿದ ವೈಲ್ಡ್ ಮಾಸ್ಟರ್ಸ್ ವುಮೆನ್ ತಂಡ ೪ ವಿಕೆಟ್ ಕಳೆದುಕೊಂಡು ೨೪ರನ್ ಗಳಿಸಿ ೭೧ರನ್ ಅಂತರದಲ್ಲಿ ಸೋಲುಂಡಿತ್ತು.


ಪಂದ್ಯಾವಳಿಯ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ೨೦ ಸಾವಿರ, ದ್ವಿತೀಯ ೧೦ ಸಾವಿರ, ತೃತೀಯ ೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net