

ಬೀರೂರು: ಬೀರೂರು ಪುರಸಭೆ ಮೊದಲ ಅವಧಿಯ ಅಧಿಕಾರದ ಅವಧಿ ಮುಕ್ತಾಯದ ನಂತರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಸರ್ಕಾರ ಮೀಸಲಾತಿಗೆ ನಿಗದಿಗೊಳಿಸಿ ಆದೇಶ ಹೊರಡಿಸಿರುವುದು ಎಲ್ಲರ ಕುತೂಹಲ ಕೆರಳಿಸಿದೆ.
ಚುನಾವಣೆಯಾದ ನಂತರ ಮೀಸಲಾತಿ ವಿಷಯವಾಗಿ ನ್ಯಾಯಾಲಯದ ಮೆಟ್ಟಿಲೇರಿ ವರ್ಷಗಳ ಕಾಲ ಬೀರೂರು ಪುರಸಭೆಯಲ್ಲಿ ಉಪವಿಭಾಗಾಕಾರಿಗಳ ಆಡಳಿತದಲಿತ್ತು. ಜಯಗಳಿಸಿದ ಸದಸ್ಯರು ಯಾವುದೇ ಅಧಿಕಾರವಿಲ್ಲದೆ ವರ್ಷ ಪೂರೈಸಿದ್ದರು.
ಬೀರೂರು ಪುರಸಭೆ ಒಟ್ಟು 23 ಸದಸ್ಯರ ಬಲ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ 12 ಸದಸ್ಯರ ಬೆಂಬಲ ಅಗತ್ಯವಾಗಿರುತ್ತದೆ. 23 ವಾರ್ಡ್‌ಗಳಲ್ಲಿ 9 ಕಾಂಗ್ರೆಸ್, 10 ಬಿಜೆಪಿ, 2 ಜೆಡಿಎಸ್ ಮತ್ತು 2 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಅಂದು ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿತ್ತು.
2020ರಲ್ಲಿ ನಡೆದ ಅಧ್ಯಕ್ಷರ ಚುನಾವಣೆಗೆ ಬಿಜೆಪಿಯ 10, ಜೆಡಿಎಸ್‌ನ 2 ಮತ್ತು ಪಕ್ಷೇತರರ ಬೆಂಬಲ ಪಡೆದು ಎಂ.ಪಿ.ಸುದರ್ಶನ್ ಅಧ್ಯಕ್ಷ ಹಾಗೂ ಮೀನಾಕ್ಷಮ್ಮ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕೆಲವು ತಿಂಗಳ ನಂತರ ವಾರ್ಡ್ ನಂ.20 ಸದಸ್ಯೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪರಿಶಿಷ್ಟ ಜಾತಿಗೆ ಮೀಸಲಾಗಿ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮಹಿಳಾ ಅಭ್ಯರ್ಥಿ ಜಯಗಳಿಸಿದರು. ಆಗ ಬಿಜೆಪಿ ಬಲ 11ಕ್ಕೆ ಏರಿಕೆಯಾಯಿತು.
ಅಲ್ಲಿಂದ ಸತತ 30 ತಿಂಗಳ ಅವಧಿಯವರೆಗೆ ಬೀರೂರು ಪುರಸಭೆ ಆಡಳಿತದ ಚುಕ್ಕಾಣಿ ಹಿಡಿದಿದ್ದರು. 30ತಿಂಗಳ ಅಧಿಕಾರಾವಧಿಯ ನಂತರ ಮತ್ತೆ ಮೀಸಲಾತಿ ವಿಷಯ ನ್ಯಾಯಾಲಯದ ಮೆಟ್ಟೇಲೇರಿತ್ತು.ಅಂದಿನಿಂದ ಇಂದಿನವರೆಗೂ ಚುನಾಯಿತರು ಅಧಿಕಾರವಿಲ್ಲದೆ ತರೀಕೆರೆ ಉಪವಿಭಾಗಾಧಿಕಾರಿಗಳ ಪುರಸಭೆ ಆಡಳಿತ ನಡೆಯಿತು.
ಸೋಮವಾರ ಸರ್ಕಾರ ಹೊರಡಿಸಿರುವ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಚುನಾಯಿತ ಸದಸ್ಯರಲ್ಲಿ ಸಂತಸ ಮೂಡಿಸಿದೆ. ಬೀರೂರು ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯ ಒಟ್ಟು 5 ಮಹಿಳಾ ಸದಸ್ಯರನ್ನು ಹೊಂದಿದೆ. ಮೊದಲ ಅವಧಿಗೆ ಜೆಡಿಎಸ್‌ನ ಇಬ್ಬರು ಸದಸ್ಯರ ಬೆಂಬಲವನ್ನು ನೀಡಿದ್ದಾರೆ.
ಇನ್ನೂ ಕಾಂಗ್ರೆಸ್‌ನಲ್ಲಿ ಇರುವ 9 ಸದಸ್ಯರ ಬಲದಲ್ಲಿ ಇಬ್ಬರು ಈಗಾಗಲೇ ಬಿಜೆಪಿಯಲ್ಲಿ ತೆರೆಮರೆಯಲ್ಲಿ ಗುರುತಿಸಿಕೊಂಡಿದ್ದು, 7 ಸದಸ್ಯರ ಬಲ ಮಾತ್ರ ಉಳಿಸಿಕೊಂಡಿದೆ. ಒಟ್ಟಾರೆ ಈಗ ಬಂದಿರುವ ಮೀಸಲಾತಿಯಲ್ಲಿ ಅಧಿಕಾರ ಯಾರ ಮಡಿಲಿಗೆ ಸೇರುತ್ತದೆ ಎಂಬುದು ಕಾದು ನೀಡಬೇಕಿದೆ. ಸದ್ಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿ 10 ಮಹಿಳಾ ಸದಸ್ಯರಿದ್ದು, ಬಂದಿರುವ ಮೀಸಲಾತಿ ಮಹಿಳೆಯರನ್ನೇ ಪ್ರಧಾನವಾಗಿರಿಸಿಕೊಂಡಿದೆ. ಯಾರು ಬಹುಮತ ಪಡೆದು ಯಾರು ಅಧಿಕಾರದ ಗದ್ದುಗೆ ಹಿಡುಯುತ್ತಾರೆ ಎಂಬುವುದು ಎಲ್ಲರ ಕೂತುಹಲ ಕೆರಳಿಸಿದೆ.