ಮಹಿಳಾ ಆಯೋಗದ ಕೇಂದ್ರ ಕಚೇರಿಯಲ್ಲಿ ಶೀಘ್ರ ‘ಕಾಲ್ ಸೆಂಟರ್’ ಸಖಿ ವನ್‌ಸ್ಟಾಪ್ ಸೆಂಟರ್‌ಗೆ ಭೇಟಿ ನೀಡಿ ಡಾ.ನಾಗಲಕ್ಷ್ಮಿಹೇಳಿಕೆ

saki
Published on

ಮಂಗಳೂರು: ಯಾವುದೇ ರೀತಿಯ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮಾನಸಿಕವಾಗಿಯೂ ತೊಂದರೆ ಅನುಭವಿಸುತ್ತಾರೆ. ಈಗಾಗಲೇ ರಾಜ್ಯದಲ್ಲಿ ‘ಸಖಿ’ ವನ್ ಸ್ಟಾಪ್ ಸೆಂಟರ್‌ಗಳು ಇಂತಹ ಮಹಿಳೆಯರಿಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮಹಿಳಾ ಆಯೋಗ ಶೀಘ್ರವೇ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವಿಶೇಷ ‘ಕಾಲ್ ಸೆಂಟರ್’ ಆರಂಭಿಸಲಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.


ಮಂಗಳೂರು ಲೇಡಿಗೋಶನ್ ಆಸ್ಪತ್ರೆ ಆವರಣದ ದ.ಕ. ಜಿಲ್ಲಾ ಮಟ್ಟದ ಸಖಿ ವನ್‌ಸ್ಟಾಪ್ ಸೆಂಟರ್‌ಗೆ ಭೇಟಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.


ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ಸಕಲ ರೀತಿಯ ಸೌಲಭ್ಯಗಳನ್ನು ರಾಜ್ಯ ಸರಕಾರದಿಂದ ನೀಡಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವ ಜತೆಗೆ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಇರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೆಲ್ಪ್‌ಡೆಸ್ಕ್‌ಗಳನ್ನು (ಸಹಾಯವಾಣಿ ಘಟಕ) ಆರಂಭಿಸಲು ಕ್ರಮ ವಹಿಸಲಾಗುವುದು. ಮಹಿಳೆಯ ಹಕ್ಕುಗಳ ಹಾಗೂ ಸೌಲಭ್ಯಗಳ ಬಗ್ಗೆ ಶೇ. 99ರಷ್ಟು ಮಹಿಳೆಯರಿಗೆ ಜಾಗೃತಿಯ ಕೊರತೆ ಇದೆ. ಈ ನಿಟ್ಟಿನಲ್ಲಿ ಆಯೋಗದ ಅಧ್ಯಕ್ಷೆಯಾಗಿ ಪ್ರಮುಖ ಆದ್ಯತೆ ನೀಡಲಿದ್ದೇನೆ ಎಂದು ಅವರು ಹೇಳಿದರು.


ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿರುವ ಸಖಿ ಕೇಂದ್ರದಲ್ಲಿ ಕಳೆದ ಫೆಬ್ರವರಿ ತಿಂಗಳೊಂದರಲ್ಲಿ 30 ಪ್ರಕರಣಗಳು ದಾಖಲಾಗಿವೆ. ಅವರಿಗೆ ಅಗತ್ಯ ಸಾಂತ್ವನ, ನೆರವಿನ ಜತೆಗೆ ಅವರಿಗೆ ಉತ್ತಮ ಜೀವನವನ್ನು ಒದಗಿಸುವ ನಿಟ್ಟಿನಲ್ಲಿ ಸಖಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಮಂಗಳೂರಿನ ಸಖಿ ಕೇಂದ್ರವು ಸುಸಜ್ಜಿತ ಸೌಲಭ್ಯಗಳೊಂದಿಗೆ ಮಾದರಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕರಾದ ಡಾ.ದುರ್ಗಾಪ್ರಸಾದ್, ಸಖಿ ವನ್‌ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಪ್ರಿಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net