ಜಗತ್ತಿನ ಯಾವುದೇ ಸಂಶೋಧನೆಗಳು ಶಾಶ್ವತ ಸತ್ಯವಲ್ಲ

HUN-NOV-24-1(MAHILA COLLEGE PROGRAMME)
ಜಗತ್ತಿನ ಯಾವುದೇ ಸಂಶೋಧನೆಗಳು ಶಾಶ್ವತ ಸತ್ಯವಲ್ಲ
Published on

ಹುಣಸೂರು: ಸಂಶೋಧನೆಗಳು ಯಾವಾಗಲೂ ಸತ್ಯದ ಅನಾವರಣದ ಮೂಲ ಮಾರ್ಗವಾಗಿರಬೇಕು ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ಕಾರ್ಯಾಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.

ಕಾಲೇಜಿನ ಐಕ್ಯೂಎಸಿ, ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಪದವಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಸಂಶೋಧನಾ ಮಾದರಿ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಶೋಧಕರು ಸತ್ಯದ ಪ್ರತಿಪಾದಕರಾಗಿದ್ದು, ಅವರು ತಮ್ಮ ಮೌಲ್ಯಯುತವಾದ ಸಂಶೋಧನೆಗಳ ಮೂಲಕ ದೇಶದ ಆರ್ಥಿಕ, ಸಾಮಾಜಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಗೆ ಅನುವು ಮಾಡಿಕೊಡುತ್ತಾರೆ. ಹಾಗೆಯೇ ಜಗತ್ತಿನ ಯಾವುದೇ ಸಂಶೋಧನೆಗಳು ಶಾಶ್ವತ ಸತ್ಯವಾಗಿರದೆ, ಮುಂದಿನ ಸಂಶೋಧನೆಗಳವರೆಗೆ ಮಾತ್ರ ನಿಜವಾಗಿರುತ್ತವೆ. ಅಲ್ಲದೇ, ಸಂಶೋಧಕರ ಹಾದಿಯೂ ಹೂವಿನ ಪಥವಾಗಿರದೆ, ಮುಳ್ಳಿನ ಹಾದಿಯಾಗಿದೆ. ಇದನ್ನು ದಾಟಿ ಸತ್ಯದ ಹುಡುಕಾಟ ಮಾಡುವುದೇ ಸಂಶೋಧಕರ ಮುಂದಿರುವ ಸವಾಲು ಎಂದರು.

ಮೈಸೂರು ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ರಾಮಕೃಷ್ಣ ಮಾತನಾಡಿ, ಸಂಶೋಧಕರಿಗೆ ದೃಢ ನಿರ್ಧಾರವಿರಬೇಕು. ಸಾಧಿಸುವ ಅಚಲ ಹಂಬಲವಿರಬೇಕು. ಸಂಶೋಧನೆಯು ದೇಶದ ಭವಿಷ್ಯವನ್ನೇ ಬದಲಿಸಬಲ್ಲದು. ಸಂಶೋಧನೆಗಳು ವೈಜ್ಞಾನಿಕ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ನೆರವು ನೀಡುವುದಲ್ಲದೆ ದೇಶದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಬಲ್ಲವು ಎಂದರು.
ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸಂಚಾಲಕ ಡಾ.ಎನ್.ಕರುಣಾಕರ, ಪ್ರಾಂಶುಪಾಲ ಪುಟ್ಟಶೆಟ್ಟಿ, ಐಕ್ಯೂಎಸಿ ಸಂಚಾಲಕ ಡಾ.ಪ್ರತಿಭಾ ಜೆನ್ನಿಫರ್ ಅಂದ್ರಾದೆ, ಡಾ.ಬೋಪಯ್ಯ, ಡಾ.ವಿಶ್ವನಾಥ್, ಡಾ.ಎಚ್.ಆರ್.ದೀಪುಕುಮಾರ್, ಡಾ.ಶೋಭಾ, ಡಾ.ಆರ್.ಶ್ರೀನಿವಾಸ್. ಪ್ರೊ.ಎಲ್.ಎಸ್.ಮಂಜುನಾಥ್. ಪ್ರೊ.ಕುಮಾರ್, ಪ್ರೊ.ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net