ಮದುಮಕ್ಕಳ ಸಾಂಪ್ರದಾಯಿಕ ಶೃಂಗಾರ ಪ್ರದರ್ಶನ

udp-24-saundarya spardhe 1
Published on

ಉಡುಪಿ: ಸೌಂದರ್ಯದಲ್ಲಿ ದೈವಿಕ ಮತ್ತು ಆಸುರಿಕ ಎಂಬ ಎರಡು ವಿಧಗಳಿವೆ. ದೈವಿಕ ಸೌಂದರ್ಯ ಹೆಚ್ಚಿಸುವ ಪ್ರಯತ್ನ ನಡೆದರೆ ಸಂಸತಿ ಉಳಿಯಲು ಸಾಧ್ಯ. ಶಾಸೊಕ್ತವಾಗಿ ಅಲಂಕಾರ ಮಾಡಿಕೊಂಡವರನ್ನು ನೋಡಿದಾಗ ಪೂಜ್ಯ ಭಾವನೆ ಬರುತ್ತದೆ. ಹೀಗಾಗಿ ದೈವಿಕ ಸೌಂದರ್ಯದ ಪ್ರಚಾರ ಹೆಚ್ಚು ನಡೆಯಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ರಾಜಾಂಗಣದಲ್ಲಿ ಭಾನುವಾರ ಪರ್ಯಾಯ ಶ್ರೀ ಪುತ್ತಿಗೆ ಮಠ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪ್ರಯುಕ್ತ ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಸಹಯೋಗದೊಂದಿಗೆ ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಭಾರತದ ವಿವಿಧ ರಾಜ್ಯದ ಮದುಮಕ್ಕಳ ಸಾಂಪ್ರದಾಯಿಕ ಶೃಂಗಾರ ಪ್ರದರ್ಶನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಪ್ರಾಚಿನ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಇದಕ್ಕೆ ವಿರುದ್ಧ ನಡೆದರೆ ತಾತ್ಸಾರದ ಭಾವನೆ ಬರಬಹುದು. ಇತ್ತೀಚಿನ ದಿನಗಳಲ್ಲಿ ಮುತೆದೆಯರು ವಿಧವೆಯರಂತೆ ವೇಷ ಹಾಕಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಇಂಥ ವಿಪರ್ಯಾಸಗಳನ್ನು ಸರಿಪಡಿಸಬೇಕಿದೆ. ತಜ್ಞೆಯರು ಸೌಂದರ್ಯಕ್ಕೆ ಸರಿಯಾದ ವ್ಯಾಖ್ಯಾನ ನೀಡಬೇಕು. ಇದರಿಂದ ಸಮಾಜಕ್ಕೆ ಉಪಯೋಗವಾಗಲಿದೆ ಎಂದರು. ಉಡುಪಿ ಶ್ರೀಕೃಷ್ಣನೂ ಸ್ತ್ರೀಪರ ಹಾಗೂ ಸೌಂದರ್ಯಪ್ರಿಯನಾಗಿದ್ದಾನೆ. ಪ್ರತಿ ಶುಕ್ರವಾರ ಸಂನ್ಯಾಸಿಗಳು ಕೃಷ್ಣನಿಗೆ ಸ್ತ್ರೀ ಅಲಂಕಾರ ನೆರವೇರಿಸುವ ಸಂಪ್ರದಾಯ ಮಠದಲ್ಲಿದೆ ಎಂದು ಹೇಳಿದರು.

ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ನಂದಾ ಶೆಟ್ಟಿ ಅಧ್ಯಕ್ಷತೆ ವಹಿಸಿ, ಪಾಶ್ಚಾತ್ಯ ಸಂಸತಿ, ಉಡುಗೆ ತೊಡುಗೆಗಳಿಗೆ ಮಾರು ಹೋಗುತ್ತಿರುವ ಯುವ ಪೀಳಿಗೆಯನ್ನು ಭಾರತೀಯ ಅಲಂಕಾರಗಳತ್ತ ಸೆಳೆಯುವ ನಿಟ್ಟಿನಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಮದುಮಕ್ಕಳ ಶೃಂಗಾರವನ್ನೇ ಬದುಕಾಗಿಸಿಕೊಂಡ ಮಹಿಳಾ ಸೌಂದರ್ಯ ತಜ್ಞೆಯರಿಗೆ ಇದರಿಂದ ವಿಶೇಷ ಅವಕಾಶಗಳು ಲಭಿಸುವ ಆಶಯ ಹೊಂದಿದ್ದೇವೆ ಎಂದರು.

ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್​ ಭಟ್​, ಡಾ. ಜಿ. ಶಂಕರ್​ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ನಿಕೇತನ, ಕಾರ್ಯದರ್ಶಿ ಸಂಧ್ಯಾ ದಿನೇಶ್​, ಕೋಶಾಧಿಕಾರಿ ಗೀತಾ ದಯಾನಂದ, ಸ್ಥಾಪಕ ಅಧ್ಯೆ ಮರಿಯಾ ಹೆರಾಲ್ಡ್​, ಸ್ಥಾಪಕ ಕಾರ್ಯದರ್ಶಿ ವೇದಾ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net