

ಸೊರಬ: ತಾಲೂಕಿನ ಕುಪ್ಪಗಡ್ಡೆ ಗ್ರಾಮ ಪಂಚಾಯಿತಿ ಆವರಣದಲ್ಲಿ ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಹಾಗೂ ಮುಖ್ಯಮಂತ್ರಿಗಳ ಜತೆಗೆ ಲಾನುಭವಿಗಳ ವರ್ಚುವಲ್ ನೇರ ಸಂವಾದ ಕಾರ್ಯಕ್ರಮವನ್ನು ಬುಧವಾರ ಯಶಸ್ವಿಯಿತು.
ಕುಪ್ಪಗಡ್ಡೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಾವಿರಾರು ಜನ ಲಾನುಭವಿಗಳು ಪಾಲ್ಗೊಂಡಿದ್ದರು. ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ ನೀಡುತ್ತಿದ್ದಂತೆ ಲಾನುಭವಿಗಳು ನೇರ ಪ್ರಸಾರವಾಗುತ್ತಿರುವ ಕಾರ್ಯಕ್ರಮ ವೀಕ್ಷಿಸಿ ಚಪ್ಪಾಳೆ ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಜತೆ ಸಂವಾದದಲ್ಲಿ ಮಾತನಾಡಿದ ಲಾನುಭವಿ ಮೆಹಬೂಬಿ ಅಬ್ದುಲ್ ರಹೀಮ್, ಗೃಹಲಕ್ಷ್ಮೀ ಯೋಜನೆ ಮೂಲಕ ಕುಟುಂಬದ ಯಜಮಾನಿ ಮಹಿಳೆಗೆ 2 ಸಾವಿರ ರೂ. ನೀಡುತ್ತಿರುವುದು ತುಂಬ ಸಹಾಯಕವಾಗಲಿದೆ. ವೈಯಕ್ತಿಕವಾಗಿ ನಾನು ಈ ಹಣವನ್ನು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯ ಕಾಳಜಿಗೆ ಬಳಸಿಕೊಳ್ಳುತ್ತೇನೆ. ಈ ಯೋಜನೆಯಿಂದ ಮಹಿಳೆಯರ ಸಬಲೀಕರಣವಾಗಲು ಸಹಕಾರಿಯಾಗುತ್ತದೆ. ಈ ದೃಷ್ಟಿಯಿಂದ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಯೋಜನೆಯ ಲಾನುಭವಿಗಳಾದ ಕಮಲಾಕ್ಷ್ಮೀ ಸುರೇಶ್‌ಕುಮಾರ್, ಮಮತಾ ರೇವಣಪ್ಪ, ವಿದ್ಯಾ ಗುರುರಾಜ್, ಕಲ್ಪನಾ ರಮೇಶ್ ಅವರು ಸಹ ಸಿಎಂ ಜತೆ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಸರ್ಕಾರ ಕೈಗೊಂಡ ಗೃಹಲಕ್ಷ್ಮೀ ಯೋಜನೆ ಅನುಷ್ಠಾನವಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಲೋಖಂಡೆ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರದೀಪ್‌ಕುಮಾರ್, ಸಿಡಿಪಿಒ ನಂದಕುಮಾರ್, ಕುಪ್ಪಗಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ಕೇಶವ್, ಉಪಾಧ್ಯಕ್ಷೆ ಮಮತಾ ರೇವಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಜಿ.ಶೇಖರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಶ್ರೀರಾಮ್, ನರೇಗಾ ಸಹಾಯಕ ನಿರ್ದೇಶಕಿ ಸೀಮಾ, ಪಿಡಿಒ ಪರಮೇಶ್, ಲೆಕ್ಕ ಸಹಾಯಕಿ ಚಂದ್ರಮ್ಮ ಇತರರಿದ್ದರು.
ತಾಲೂಕಿನ ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನೇರ ಪ್ರಸಾರವನ್ನು ಪ್ರೊಜೆಕ್ಟರ್ ಮೂಲಕ ಆಯಾಯ ವ್ಯಾಪ್ತಿಯ ಲಾನುಭವಿಗಳು ವೀಕ್ಷಿಸಿ ಸಂತಸ ವ್ಯಕ್ತಪಡಿಸುವ ಜತೆಗೆ ಸರ್ಕಾರಕ್ಕೆ ಶುಭಕೋರಿದ್ದು ಕಂಡುಬಂತು.