ಮಹಿಳಾ ಮೈತ್ರಿ, ಸ್ವಾವಲಂಬನೆ ಗುರಿ

26Koppa1
ಕೊಪ್ಪದಲ್ಲಿ ಇನ್ನರ್ ವೀಲ್ ಕ್ಲಬ್ ಕೊಪ್ಪ-ಸೆಂಚುರಿ ನೂತನ ಘಟಕವನ್ನು ಪೂರ್ಣಿಮಾ ರವಿ ಉದ್ಘಾಟಿಸಿದರು. ವಾರಿಜಾ ಜಗದೀಶ್, ವಾಣಿ ಗಣೇಶ್, ಲಕ್ಷ್ಮೀ ಆನಂದ್ ಇತರರಿದ್ದರು.
Published on

ಕೊಪ್ಪ: ಮಹಿಳೆಯರಲ್ಲಿ ಪರಸ್ಪರ ಮೈತ್ರಿ, ಸ್ವಾವಲಂಬನೆ, ನಾಯಕತ್ವ ಗುಣ, ಸೇವಾ ಮನೋಭಾವನೆ ಮತ್ತು ತಿಳುವಳಿಕೆಯನ್ನು ಮೂಡಿಸುವುದು ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯಾಗಿರುವ ಇನ್ನರ್ ವೀಲ್ ಕ್ಲಬ್‌ನ ಉದ್ದೇಶವಾಗಿದೆ ಎಂದು ಕ್ಲಬ್‌ನ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ತಿಳಿಸಿದರು.

ಪಟ್ಟಣದಲ್ಲಿ ಇನ್ನರ್ ವೀಲ್ ಕ್ಲಬ್ ಕೊಪ್ಪ-ಸೆಂಚುರಿ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, 1924ರಲ್ಲಿ ಇಂಗ್ಲೆಂಡಿನ ಮಾಂಚೆಸ್ಟರ್‌ನಲ್ಲಿ ಸ್ಥಾಪನೆಗೊಂಡಿರುವ ಇನ್ನರ್ ವೀಲ್ ಕ್ಲಬ್ ಇಂದು ಶತಮಾನೋತ್ಸವದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ತೀರ್ಥಹಳ್ಳಿ ಇನ್ನರ್ ವೀಲ್ ಕ್ಲಬ್‌ನ ಮಾರ್ಗದರ್ಶನದಲ್ಲಿ ಸ್ಥಾಪನೆಗೊಳ್ಳುತ್ತಿರುವ ಇನ್ನರ್ ವೀಲ್ ಕ್ಲಬ್ ಕೊಪ್ಪ-ಸೆಂಚುರಿಯು ಶತಮಾನೋತ್ಸವದ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಹೆಚ್ಚಿನ ಜವಾಬ್ದಾರಿಯಿಂದ ಪ್ರತಿ ತಿಂಗಳು ಸಭೆಗಳನ್ನು ನಡೆಸಿ ಉತ್ತಮ ಸೇವಾ ಚಟುವಟಿಕೆಗಳ ಮೂಲಕ ಈ ಕ್ಲಬ್‌ನ್ನು ಮಾದರಿ ಸಂಸ್ಥೆಯಾಗಿ ಮುನ್ನಡೆಸಬೇಕಿದೆ ಎಂದರು.
ಜಿಲ್ಲೆ 318ರ ಇಎಸ್‌ಒ ವಾರಿಜಾ ಜಗದೀಶ್ ಮಾತನಾಡಿ, ಇನ್ನರ್ ವೀಲ್ ಕ್ಲಬ್‌ನ 318ನೇ ಜಿಲ್ಲೆಯು ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ ಮತ್ತು ಮೈಸೂರು ಸೇರಿದಂತೆ ಕರ್ನಾಟಕದ ಎಂಟು ಕಂದಾಯ ಜಿಲ್ಲೆಗಳಲ್ಲಿ ವ್ಯಾಪಿಸಿದೆ. ವಿಭಿನ್ನ ಸಂಸ್ಕೃತಿಯ ಮಹಿಳೆಯರು ಒಟ್ಟಾಗಿ ಸೇರಿ ಪರಸ್ಪರ ಅರಿತುಕೊಂಡು, ಮಹಿಳಾ ಸಬಲೀಕರಣದ ಜತೆಗೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಕ್ಲಬ್‌ನ ಸೇವಾ ಚಟುವಟಿಕೆಯ ಭಾಗವಾಗಿ ಪೌರ ಕಾರ್ಮಿಕರ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ಪಠ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ತೀರ್ಥಹಳ್ಳಿ ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆ ವಾಣಿ ಗಣೇಶ್, ಕೊಪ್ಪ ಕ್ಲಬ್‌ನ ನೂತನ ಅಧ್ಯಕ್ಷೆ ಲಕ್ಷ್ಮೀ ಆನಂದ್ ಮಾತನಾಡಿದರು. ಪೂರ್ಣಿಮಾ ಉಮೇಶ್ ಕ್ಲಬ್‌ನ ಧ್ಯೇಯ ಗೀತೆ ಹಾಡಿದರು. ಪದ್ಮಾವತಿ ರಮೇಶ್ ಜಿಲ್ಲಾಧ್ಯಕ್ಷರನ್ನು ಪರಿಚಯಿಸಿದರು. ಕಾರ್ಯದರ್ಶಿ ಮೈತ್ರಾ ಗಣೇಶ್ ವಂದಿಸಿದರು. ಕಾರ್ಯದರ್ಶಿಗಳಾದ ಶಬರಿ ಕಡಿದಾಳ್, ಮೋಹಿನಿ ಹರೀಶ್, ಉಪಾಧ್ಯಕ್ಷೆ ಅನುಸೂಯ ಕೃಷ್ಣಮೂರ್ತಿ, ಖಜಾಂಚಿ ಅರ್ಚನಾ ಜಿನೇಶ್, ಐಎಸ್‌ಒ ಬಿ.ಇ.ಕವಿತಾ, ಸಹ ಕಾರ್ಯದರ್ಶಿ ತೀರ್ಥ ಹೇಮಂತ್ ಮುಂತಾದವರಿದ್ದರು. ಸ್ವಪ್ನಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net