

ಮೈಸೂರು: ಹಲವು ಜವಾಬ್ದಾರಿ, ವಿಭಿನ್ನ ಸವಾಲು, ಸಮಸ್ಯೆ, ಸನ್ನಿವೇಶಗಳನ್ನು ನಿಭಾಯಿಸುವ ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹೇಳಿದರು.
ಲೇಖಕಿ ಮಲ್ಲಿಕಾ ಮಳವಳ್ಳಿ ಅಭಿನಂದನಾ ಸಮಿತಿಯಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ವಸತಿ ನಿಲಯಗಳ ಸಮುಚ್ಛಯದ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಲ್ಲಿಕಾ ಅವರ ಅಭಿನಂದನಾ ಕೃತಿ ಸದಾಚಾರ ಸಂಪನ್ನೆ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಬಹುಶಃ ಪುರುಷರಿಗಿಂತ ಮಹಿಳೆಯರು ಹೆಚ್ಚು ಸವಾಲು, ಕಷ್ಟಗಳನ್ನು ಎದುರಿಸುತ್ತಾರೆ. ಅದೆಲ್ಲಾ ಸವಾಲುಗಳ ನಡುವೆ ಮದುವೆ, ಮಕ್ಕಳು, ಕುಟುಂಬ, ಶಿಕ್ಷಣ, ಸಾಹಿತ್ಯದಲ್ಲಿ ಸಾಧನೆ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯ ಎಂದು ಬಣ್ಣಿಸಿದರು.
ಪುರುಷ ಪ್ರಧಾನ ಸಮಾಜದಲ್ಲಿ ಮುನ್ನಲೆಗೆ ಬಂದು ಸಾಹಿತ್ಯ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ನಿಲ್ಲುವುದು ಮಲ್ಲಿಕಾ ಅವರಲ್ಲಿರುವ ಪ್ರತಿಭೆಗೆ ಸಿಕ್ಕ ಫಲ. ಮಲ್ಲಿಗೆಯ ಕಂಪಿನಂತಹ ಮಲ್ಲಿಕಾ ಅವರಿಗೆ ಸಾಹಿತ್ಯದ ಕಂಪನ್ನು ಎಲ್ಲೆಡೆ ಪಸರಿಸುವ ಶಕ್ತಿ ಇದೆ ಎಂದರು.
ಮಲ್ಲಿಕಾ ಅವರನ್ನು ನೋಡಿದರೆ ಬಹುಶಃ ಸದಾಚಾರ ಸಂಪನ್ನೆ ಎನ್ನುವ ಮಾತು ಅತ್ಯಂತ ಸೂಕ್ತವಾದದ್ದು. ಅವರಲ್ಲಿ ಎಲ್ಲರಿಗಿಂತ ವಿಶೇಷವಾದ ಪ್ರತಿಭೆ ಹಾಗೂ ಕೌಶಲ್ಯವಿದೆ. ಅವರಿಂದ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಬರಹಗಳು ಪ್ರಕಟವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಾಹಿತಿ ಡಾ.ಪ್ರದೀಪ ಕುಮಾರ್ ಹೆಬ್ರಿ ಮಾತನಾಡಿ, ಇವತ್ತಿನ ಸದಾಚಾರ ಸಂಪನ್ನೆ ಕೃತಿ ನಮ್ಮೆಲ್ಲರ ಕರದರ್ಶಕ ಲಿಂಗವಾಗಬೇಕು. ಇದಲ್ಲದೆ ಮುಖ್ಯವಾಗಿ ಮಲ್ಲಿಕಾ ಅವರ ಜೀವನ ಮತ್ತು ಕೃತಿ ಬಗ್ಗೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಂಶೋಧನೆಯಾಗಬೇಕು. ಆಗ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪೋಷಕರು ಮಕ್ಕಳನ್ನು ಭವಿಷ್ಯದಲ್ಲಿ ಯಾವ ಹುದ್ದೆಗೆ ಕಳುಹಿಸಲು ಇಚ್ಛಿಸುತ್ತಿರುವಿರೋ, ಅದರಂತೆ ಅವರ ಭವಿಷ್ಯಕ್ಕಾಗಿ ಸಾಹಿತ್ಯಾಸಕ್ತಿಯನ್ನು ಮೂಡಿಸಬೇಕು. ಪೋಷಕರು ಮಕ್ಕಳಿಗೆ ಮೊಬೈಲ್, ಟಿವಿ ಎಲ್ಲವನ್ನು ಒದಗಿಸುತ್ತಾರೆ. ಆದರೆ ಅದಕ್ಕಿಂತ ಮುಖ್ಯವಾಗಿ ಕನ್ನಡದ ಪುಸ್ತಕವನ್ನು ನೀಡುವ ಕೆಲಸವಾಗಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಮುಂದಿನ ತಲೆಮಾರಿಗೆ ಕನ್ನಡವನ್ನು ತೆಗೆದುಕೊಂಡು ಹೋಗುವವರಿಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಉದ್ಯಮಿ ವಾಣಿಕ್‌ಚಂದ್ ಬಲ್ಡೋಟಾ, ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ, ಲೇಖಕಿ ಮಲ್ಲಿಕಾ, ಬಿ.ಎಂ.ಮಹದೇವಪ್ಪ, ಕೃತಿ ಸಂಪಾದಕ ಡಾ.ಎಚ್.ಎಸ್. ಮುದ್ದೇಗೌಡ ಇತರರು ಇದ್ದರು.