

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿಯ ಕಣ್ಣಿಗೆ ಖಾರದ ಪುಡಿ ಎರಚಿ, ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.
ಇಲ್ಲಿನ ಸೊಣ್ಣಶೆಟ್ಟಿಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಪುಷ್ಪಲತಾ ಮತ್ತು ಅವರ ಪತಿ ಸೋಮೇಶ್ ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಳ್ಳರು ಈ ದುಷ್ಕೃತ್ಯ ಎಸಗಿದ್ದಾರೆ. ಮೈಲಾಪುರ ಮತ್ತು ಕೈವಾರ ಗವಿ ರಸ್ತೆಯ ಮಾರ್ಗದಲ್ಲಿ ಆಂಜನೇಯಸ್ವಾಮಿ ದೇವಾಲಯ ಮುಂಭಾಗ ಬರುತ್ತಿದ್ದಂತೆ ಅಡ್ಡಗಟ್ಟಿ ದ್ವಿಚಕ್ರವಾಹನವನ್ನು ಮೊದಲು ಬೀಳಿಸಿದ್ದಾರೆ. ಇಬ್ಬರು ಮೇಲೆಳಲು ಯತ್ನಿಸುತ್ತಿದ್ದಂತೆ ಖಾರದ ಪುಡಿ ಎರಚಿದ್ದಾರೆ. ತಕ್ಷಣ ಮಹಿಳೆಯ ಕೊರಳಿಗೆ ಕೈ ಹಾಕಿ, ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಇಬ್ಬರು ಕಳ್ಳರು 30 ರಿಂದ 35 ವರ್ಷದವರು. ಕೆಂಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದಿದ್ದರು. ತುರ್ತು ಸಭೆ ಇದ್ದ ಹಿನ್ನೆಲೆಯಲ್ಲಿ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಶಾಲೆಗೆ ಕರೆದುಕೊಂಡು ಹೋಗಿ ಬಿಡಲು ತೆರಳಲಾಗುತ್ತಿತ್ತು ಎಂದು ದೂರಿನಲ್ಲಿ ಸೋಮೇಶ್ ತಿಳಿಸಿದ್ದಾರೆ.
ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುದಾರರು ನೀಡಿದ ಮಾಹಿತಿಯನ್ನಾಧಾರಿಸಿ ತನಿಖೆ ಕೈಗೊಂಡಿದ್ದಾರೆ. ಇದರ ನಡುವೆ ಸರಗಳ್ಳರು ಟಾರ್ಗೆಟ್ ಮಾಡಿ, ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿರುವುದು. ಅದರಲ್ಲೂ ಖಾರದಪುಡಿ ಎರಚಿ ಹಲ್ಲೆ ಮಾಡುತ್ತಿರುವ ಪ್ರಕರಣಗಳಿಂದ ಜನರು ಆತಂಕಕ್ಕೊಳಗಾಗಿದ್ದಾರೆ.