

ಮಡಿಕೇರಿ: ಪ್ರಸ್ತುತ ದಿನಗಳಲ್ಲಿ ಮಹಿಳಾ ಲೇಖಕಿಯರು ತಮ್ಮ ಬರಹದ ಮೂಲಕ ಸಮಾಜದ ಕಣ್ಣನ್ನು ತೆರೆಸುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ನಿರ್ಮಾಪಕಿ, ಲೇಖಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ಬರೆದಿರುವ ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ಕನ್ನಡ ಪುಸ್ತಕ ಮುಖಾಮುಖಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪುಸ್ತಕಗಳನ್ನು ಓದಿ ಹೆಚ್ಚು ಜ್ಞಾನಾರ್ಜನೆಯನ್ನು ಪಡೆದುಕೊಂಡರೆ ಉನ್ನತ ಸ್ಥಾನಕ್ಕೇರಲು ಸಾಧ್ಯವಿದೆ. ಆದ್ದರಿಂದ ಪ್ರತಿಯೊಬ್ಬರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತವೆ. ಸಾಹಿತ್ಯದಲ್ಲಿ ಅಡಗಿರುವ ಸಾರಾಂಶ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮುಖಾಮುಖಿ ಪುಸ್ತಕವು ಉತ್ತಮ ಸಂದೇಶವನ್ನು ಹೊಂದಿದ್ದು, ಲೇಖಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ಚಲನಚಿತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಇದೀಗ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದು, ಇವರ ಪ್ರಯತ್ನ ಮುಂದುವರೆಯಲಿ ಎಂದು ಶುಭ ಹಾರೈಸಿದರು. ಕೊಡವ ಮಕ್ಕಡ ಕೂಟಕ್ಕೆ ಅನೇಕ ಪುಸ್ತಕಗಳನ್ನು ಬಿಡುಗಡೆ ಮಾಡಿದ ಹೆಗ್ಗಳಿಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಡಿಕೇರಿ ಕೊಡವ ಸಮಾಜದ ಮಾಜಿ ಉಪಾಧ್ಯಕ್ಷೆ ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ನಿವೃತ್ತ ಉಪನ್ಯಾಸಕಿ ಕಲಿಯಂಡ ಸರಸ್ವತಿ ಚಂಗಪ್ಪ ಮಾತನಾಡಿ, ಪುಸ್ತಕಗಳು ಗುಣಮಟ್ಟದಿಂದ ಕೂಡಿರಬೇಕು ಮತ್ತು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಿದ್ದೇವೆ ಎಂಬುವುದನ್ನು ನಿಖರವಾಗಿ ಪ್ರತಿಬಿಂಬಿಸಬೇಕು. ಪುಸ್ತಕದಲ್ಲಿ ಶುದ್ಧ ಭಾಷೆಯನ್ನು ಬಳಸಬೇಕ, ಭಾಷೆಯಲ್ಲಿ ಸೌಂದರ್ಯವಿದೆ ಅದನ್ನು ಅನುಭವಿಸಲು ಬರಹಗಾರರು ಅವಕಾಶ ಕಲ್ಪಿಸಬೇಕು. ಬರವಣಿಗೆ ಉತ್ತಮ ರೀತಿಯಲ್ಲಿದ್ದರೆ ಪುಸ್ತಕ ಓದುಗರ ಸಂಖ್ಯೆಯು ಹೆಚ್ಚಾಗಲಿದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳು ಓದುವ ಹವ್ಯಾಸವನ್ನು ಕಡಿಮೆ ಮಾಡಿದ್ದು, ಉತ್ತಮ ಬರಹಗಳು ಬಂದಲ್ಲಿ ಮಕ್ಕಳು ಕೂಡ ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಕೊಡಗಿನಲ್ಲಿ ಬರಹಗಾರರಿಗೆ ಬಹಳ ಕೊರತೆ ಇತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಬರಹಗಾರರ ಸಂಖ್ಯೆ ಹೆಚ್ಚಿದ್ದು, ಕನ್ನಡ, ಕೊಡವ ಭಾಷೆಯಲ್ಲಿ ಕೃತಿಗಳನ್ನು ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯವೆಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಸಾಹಿತ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಗುರುತಿಸಿಕೊಳ್ಳುತ್ತಿದ್ದು, ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಇಂದು ಸಾಹಿತ್ಯಾಭಿರುಚಿ ಮೂಡಿಸುವ ಅಗತ್ಯವಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಮಂದಿ ಗುರುತಿಸಿಕೊಳ್ಳುವಂತಾಗಬೇಕು, ಓದುಗರ ಸಂಖ್ಯೆಯೂ ಹೆಚ್ಚಾಗಬೇಕು ಎಂದು ಹೇಳಿದರು.
ಕೊಡವ ಮಕ್ಕಡ ಕೂಟದ ಮೂಲಕ ಅನೇಕ ಸಾಹಿತಿಗಳು ತಮ್ಮ ಪುಸ್ತಕವನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅಲ್ಲದೇ ಕೃತಿಯನ್ನು ಅನಾವರಣಗೊಳಿಸಬೇಕು ಎಂಬ ಕನಸಿಗೆ ಕೊಡವ ಮಕ್ಕಡ ಕೂಟ ಸ್ಫೂರ್ತಿ ನೀಡುತ್ತಿದೆ ಎಂದರು.
ಮುಖಾಮುಖಿ ಪುಸ್ತಕದ ಲೇಖಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ, ಮುಖಾಮುಖಿ ನನ್ನ ಚೊಚ್ಚಲ ಕೃತಿ, ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನು ಕೂಡ ಹೆಕ್ಕಿ ಬರೆದಿದ್ದೇನೆ. ನಮ್ಮನ್ನೇ ನಾವು ಗೆಲ್ಲಲಾಗುವುದಿಲ್ಲ ಎನ್ನುವ ಸತ್ಯವನ್ನು ಯಾರೂ ಅರ್ಥ ಮಾಡಿಕೊಳ್ಳುವುದೇ ಇಲ್ಲ. ಮನೋರೋಗಕ್ಕೆ ಒಳಗಾದ ವ್ಯಕ್ತಿಯ ಕುರಿತು ಬರೆಯಲಾಗಿದ್ದು, ಜೀವನದ ಹಲವು ಮಜಲುಗಳನ್ನು ತೋರಿಸಲಾಗಿದೆ. ಅಲ್ಲದೇ ದಾಂಪತ್ಯ ಬದುಕಿನ ಹಲವು ಸತ್ಯ ಸಂಗತಿಗಳನ್ನು ಪರಿಪೂರ್ಣವಾಗಿ ದಾಖಲಿಸಲು ಪ್ರಯತ್ನಿಸಲಾಗಿದೆ. ಜೀವನದ ಜಂಜಾಟದಲ್ಲಿ ಕಳೆದು ಹೋಗುವ ನಮಗೆ ಪ್ರತಿ ಮುಂಜಾನೆಗೂ ಒಂದು ಉದ್ದೇಶವಿರಬೇಕು ಎನ್ನುವುದನ್ನು ತಿಳಿಸಲು ಪುಸ್ತಕದ ಮೂಲಕ ಪ್ರಯತ್ನಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್(ಮಾಸ್ಟರ್ಸ್) ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಹಾಗೂ ಕೊಡವ ಮಕ್ಕಡ ಕೂಟದ ನಿರ್ದೇಶಕಿ ಬೊಳ್ಳಜಿರ ಯಮುನಾ ಅಯ್ಯಪ್ಪ ಉಪಸ್ಥಿತರಿದ್ದರು.