

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗೆಲುವಿಗೆ ಪ್ರಾರ್ಥಿಸಿ ಜಿಲ್ಲೆಯ ಮಹಿಳಾ ಸಂಘ ಸಂಸ್ಥೆಗಳ ಒಕ್ಕೂಟದಿಂದ ಭಾನುವಾರ ಚಾಮುಂಡಿ ಬೆಟ್ಟ ನಡಿಗೆ ಕಾರ್ಯಕ್ರಮ ನೆರವೇರಿತು.
ಮೈಸೂರು ಮತ್ತು ಕೊಡಗು ಲೋಕಸಭಾ ಮಹಿಳಾ ಕಾರ್ಯದ ಸಂಚಾಲಕಿ ಹೇಮಾ ನಂದೀಶ್ ನೇತೃತ್ವದಲ್ಲಿ ಚಾಮುಂಡಿಬೆಟ್ಟದ ಪಾದದಲ್ಲಿ ಜಮಾವಣೆಗೊಂಡು ಸಾವಿರಾರು ಮಹಿಳೆಯರು, ‘ವರವ ಕೊಡೆ ಚಾಮುಂಡಿ ವರವ ಕೊಡೆ’, ‘ನಮ್ಮ ನಡಿಗೆ ವಿಜಯದ ಕಡೆಗೆ’ ಸೇರಿದಂತೆ ನಾನಾ ಘೋಷಣೆ ಕೂಗುತ್ತಾ ಮೆಟ್ಟಿಲ ಮೂಲಕ ಬೆಟ್ಟ ಹತ್ತಿದರು. ಬಳಿಕ ಯದುವೀರ್ ಅವರಿಗೆ ಜಯ ದೊರೆಯಬೇಕು ಎಂದು ನಾಡದೇವತೆ ತಾಯಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು.
ಹೇಮಾ ನಂದೀಶ್ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆದ್ಯತೆ ನೀಡಿದ್ದು, ಮಹಿಳೆಯರನ್ನು ಆರ್ಥಿಕವಾಗಿ ಗಟ್ಟಿಗೊಳಿಸಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಸೇರಿದಂತೆ ಹಲವು ಯೋಜನೆಗಳನ್ನು ಸ್ತ್ರೀ ಸಂಕುಲಕ್ಕಾಗಿ ಪರಿಚಯಿಸಿದೆ. ಇದರಿಂದ ಮಹಿಳಾ ಸಬಲೀಕರಣವಾಗಿದೆ ಎಂದರು.
ಆದ್ದರಿಂದ ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ. ಆ ನಿಟ್ಟಿನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಲ್ಲ ಮಹಿಳೆಯರು ಮತ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಚಿವ ಎಸ್.ಎ.ರಾಮದಾಸ್, ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ಆರ್.ಮಹಾದೇವಸ್ವಾಮಿ, ಮುಖಂಡರಾದ ಕೇಬಲ್ ಮಹೇಶ್, ಎಚ್.ಜಿ.ಗಿರಿಧರ್, ರಶ್ಮಿ, ಕಾವೇರಿ, ಸವಿತಾ ಘಾಟ್ಕೆ, ಉಮಾ ಜಾದವ್, ನಳಿನಿ, ಮಮತಾ ಚಂದ್ರಶೇಖರ್, ಇಂದ್ರ ಇತರರಿದ್ದರು.