ಪ್ರಯಾಣದಲ್ಲೂ ‘ಶಕ್ತಿ’ ಪ್ರದರ್ಶಿಸಿದ ನಾರಿಯರು

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯ ಫಲಾನುಭವಿಗಳಾದ ಮಹಿಳಾ ಪ್ರಯಾಣಿಕರ ಸಂಖ್ಯೆ ಜಿಲ್ಲೆಯಲ್ಲಿ ಭಾರಿ ಹೆಚ್ಚಳವಾಗಿದೆ..!


ಒಟ್ಟಾರೆ ಪ್ರಯಾಣಿಕರಲ್ಲಿ ‘ಶಕ್ತಿ’ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಶೇ.60ರಷ್ಟಿದೆ. ಆದಾಯವೂ ಏರಿಕೆಯಾಗಿದೆ. ಶಕ್ತಿ ಯೋಜನೆ ಮುನ್ನ ನಿತ್ಯ 4.62 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಈ ಯೋಜನೆ ಜಾರಿ ಬಳಿಕ ನಿತ್ಯ 6.07 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ.


‘ಶಕ್ತಿ’ಗೆ ಒಂದು ವರ್ಷ: 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಇದು 2023ರ ಜೂನ್ 11ರಂದು ಜಾರಿಗೆ ಬಂದಿದ್ದು, ಒಂದು ವರ್ಷ ಪೂರೈಸಿರುವ ಈ ಯೋಜನೆ ಕೆಎಸ್‌ಆರ್‌ಟಿಸಿಗೆ ಆದಾಯ ಶಕ್ತಿ ತುಂಬಿದ್ದರೆ, ಭಾರಿ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆಯನ್ನೂ ಹಿಗ್ಗಿಸಿದೆ. ಕೆಎಸ್‌ಆರ್‌ಟಿಸಿಗೆ ಇದರ ನಿರ್ವಹಣೆ ಸಹ ಸವಾಲಾಗಿದೆ.

ಶೇ.60ರಷ್ಟು ಶಕ್ತಿ ಮಹಿಳೆಯರ ಸಂಚಾರ:


ಶಕ್ತಿಯ ಯೋಜನೆ ಫಲವಾಗಿ ಹೆಣ್ಣು ಮಕ್ಕಳ ಬಸ್ ಸಂಚಾರ ನಿರಾತಂಕವಾಗಿ ಸಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಈ ಯೋಜನೆಯಡಿ ಬರೋಬ್ಬರಿ 14.09 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಈ ಅವಧಿಯಲ್ಲಿ ಬಸ್ ಸಂಚಾರ ಮಾಡಿದ ಒಟ್ಟಾರೆ ಪ್ರಯಾಣಿಕರ ಸಂಖ್ಯೆ 23.45 ಕೋಟಿ ಆಗಿದೆ. ಈ ಪೈಕಿ ಶಕ್ತಿ ಯೋಜನೆಯ ಪ್ರಯಾಣಿಕರ ಪಾಲು ಶೇ.60.07ರಷ್ಟಾಗಿದೆ ಎಂಬುದು ಹುಬ್ಬೇರಿಸುವಂತೆ ಮಾಡಿದೆ.


ಒಂದು ವರ್ಷ ಅವಧಿಯಲ್ಲೇ ಸಂಚಾರ ಮಾಡುವ ಹೆಣ್ಣು ಮಕ್ಕಳ ಸಂಖ್ಯೆ ಏರಿಕೆಯಾಗಿದೆ. ಯೋಜನೆ ಆರಂಭವಾದ ವರ್ಷವಾದ 2023-24ನೇ ಸಾಲಿನಲ್ಲಿ 11.65 ಕೋಟಿ ಮಹಿಳೆಯರು ಬಸ್‌ನಲ್ಲಿ ತಿರುಗಾಡಿದ್ದಾರೆ. ಈ ವರ್ಷದಲ್ಲಿ ಒಟ್ಟಾರೆ ಪ್ರಯಾಣಿಕರ ಸಂಖ್ಯೆಯ 19.82 ಕೋಟಿ ಇದೆ. ಇದರಲ್ಲಿ ‘ಶಕ್ತಿ’ ನಾರಿಯರ ಸಂಖ್ಯೆಯೇ ಶೇ.58.76ರಷ್ಟಿದೆ.


2024-25ನೇ ವರ್ಷ ಪೂರ್ಣಗೊಳ್ಳಲು ಇನ್ನೂ ಬಹಳಷ್ಟು ಅವಧಿ ಇದೆ. ಈಗಾಗಲೇ ಶೇ.9ರಷ್ಟು ‘ಶಕ್ತಿ’ ಪ್ರಯಾಣಿಕರ ಏರಿಕೆಯಾಗಿದೆ. ಈವರೆಗೆ 2.43 ಕೋಟಿ ಮಹಿಳೆಯರು ಸಾರಿಗೆ ಬಸ್‌ನಲ್ಲಿ ಓಡಾಟ ನಡೆಸಿದ್ದಾರೆ. ಈ ಅವಧಿಯಲ್ಲಿ ಒಟ್ಟಾರೆ ಪ್ರಯಾಣಿಕರ ಸಂಖ್ಯೆ 3.62 ಕೋಟಿ ಆಗಿದೆ. ಅದರಲ್ಲಿ ‘ಶಕ್ತಿ’ ಹೆಣ್ಣು ಮಕ್ಕಳ ಪಾಲು ಶೇ.67.24ರಷ್ಟಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಅಧಿಕವಾಗಿದೆ. ಪ್ರಸಕ್ತ ಸಾಲು ಮುಗಿಯುವ ಹೊತ್ತಿಗೆ ಈ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

ಸಾರಿಗೆ ಆದಾಯದಲ್ಲೂ ಏರಿಕೆ:


ಶಕ್ತಿ ಪ್ರಯಾಣಿಕರ ಸಂಖ್ಯೆಯಷ್ಟೇ ಏರಿಕೆಯಾಗಿಲ್ಲ. ಕೆಎಸ್‌ಆರ್‌ಟಿಸಿಗೆ ಬರುವ ಆದಾಯದಲ್ಲೂ ಗಮನಾರ್ಹ ಹೆಚ್ಚಳವಾಗಿದೆ. ಕಳೆದ ಒಂದು ವರ್ಷ ಅವಧಿಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 329.46 ಕೋಟಿ ರೂ. ಆದಾಯ ಇದಕ್ಕೆ ಆವಕವಾಗಿದೆ. ಮೊದಲ ವರ್ಷವಾದ 2023-24ನೇ ಆರ್ಥಿಕ ವರ್ಷದಲ್ಲಿ 267.75 ಕೋಟಿ ರೂ. ಶಕ್ತಿ ಯೋಜನೆ ಪ್ರಯಾಣಿಕರಿಂದ ಸಾರಿಗೆ ಆದಾಯ ಗಳಿಸಿದೆ.

2024-24ನೇ ಸಾಲಿನಲ್ಲಿ ಈ ವರೆಗೆ 61.70 ಕೋಟಿ ರೂ. ಆದಾಯ ಗಳಿಕೆಯಾಗಿದೆ. ಆರ್ಥಿಕ ನಷ್ಟದಲ್ಲೇ ಸಾಗಿದ್ದ ಕೆಎಸ್‌ಆರ್‌ಟಿಸಿಗೆ ಶಕ್ತಿ ಯೋಜನೆಯಿಂದ ಜೀವಕಳೆ ಬಂದಿದ್ದು, ಆರ್ಥಿಕ ಚೈತನ್ಯವೂ ಧಕ್ಕಿದೆ.
ಬಸ್‌ಗಳು ಭರ್ತಿ: ಸರ್ಕಾರವು ಉಚಿತ ಪ್ರಯಾಣವನ್ನು ನೀಡುತ್ತಿದ್ದರೂ ಐಷಾರಾಮಿ ಮತ್ತು ಸೌಕರ್ಯಗಳಿಗೆ ಒಗ್ಗಿಕೊಂಡಿರುವವರು ರಾಜಹಂಸ, ವೋಲ್ವೋ ಬಸ್ ಒಳಗೊಂಡ ಪ್ರೀಮಿಯಂ ಬಸ್‌ಗಳಿಗೆ ಆದ್ಯತೆ ನೀಡುತ್ತಾರೆ. ಶಕ್ತಿ ಯೋಜನೆಯಿಂದ ಅಸಂಘಟಿತ ವಲಯದ ಮಹಿಳೆಯರಿಗೆ ಅನುಕೂಲವಾಗಲಿದೆ. ಕೆಲವೇ ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದ ಬಸ್‌ಗಳು ಭರ್ತಿಯಾಗಿ ಓಡುತ್ತಿವೆ.

ಆಟೋ, ಟ್ಯಾಕ್ಸಿಗಳಿಗೆ ನಷ್ಟ:


ಕೆಂಪು ಬಸ್‌ಗಳಲ್ಲಿ ಪ್ರಯಾಣಿಕರು ಅದರಲ್ಲೂ ಮಹಿಳಾ ಪ್ರಯಾಣಿಕರ ದಟ್ಟಣೆಯನ್ನು ಹೆಚ್ಚಿಸಿದೆ. ಮಹಿಳೆಯರು ಉಚಿತ ಸರ್ಕಾರಿ ಬಸ್‌ಗಳಿಗೆ ಸ್ಥಳಾಂತರಗೊಳ್ಳುವುದರಿಂದ ಆಟೋ, ಟ್ಯಾಕ್ಸಿ ಸೇರಿದಂತೆ ಖಾಸಗಿ ವಾಹನಗಳಲ್ಲಿ ಕರೆದೊಯ್ಯುವ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿದಿದೆ ಎಂದು ಆಟೋ ಚಾಲಕ ಸಂತೋಷ ತಿಳಿಸಿದ್ದಾರೆ.

ಅನೇಕ ಮಹಿಳೆಯರು ಕುಗ್ರಾಮಗಳಲ್ಲಿ, ದೂರದ ಊರುಗಳಲ್ಲಿ ಇದರ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅನೇಕ ಸ್ಥಳಗಳಲ್ಲಿ ಬಸ್‌ಗಳ ಸೇವೆ ಸರಿಯಾಗಿಲ್ಲ. ಹಾಗಿರುವ ಸ್ಥಳಗಳಲ್ಲಿ ಮಹಿಳೆಯರು ಖಾಸಗಿ ವಾಹನಗಳು ಅಥವಾ ಆಟೋಗಳ ಮೊರೆ ಹೋಗಬೇಕಾಗುತ್ತದೆ ಎಂದು ಎಚ್.ಡಿ.ಕೋಟೆಯ ಶಿವರಾಜ್ ತಿಳಿಸಿದರು.

ಬಸ್‌ಗಳ ಕೊರತೆ ಇನ್ನೂ ನೀಗಿಲ್ಲ


ಜಿಲ್ಲೆಯಲ್ಲಿ ಪ್ರಸ್ತುತ 976 ಅನುಸೂಚಿ ಮಾರ್ಗದಲ್ಲಿ ನಿತ್ಯ 8,084 ಟ್ರಿಪ್‌ನಲ್ಲಿ ಬಸ್‌ಗಳು ಸಂಚರಿಸುತ್ತಿವೆ. 1,071 ಬಸ್‌ಗಳು ನಿತ್ಯ ಕಾರ್ಯಾಚರಣೆಯಲ್ಲಿದ್ದು, ಪ್ರತಿದಿನ ಸರಾಸರಿ 3.14 ಲಕ್ಷ ಕಿ.ಮೀ. ಸಂಚಾರ ಮಾಡುತ್ತಿವೆ. ಆದರೆ, ಈಗಲೂ ಬಸ್‌ಗಳ ಕೊರತೆ ಇದೆ. ಶಕ್ತಿ ಪ್ರಯಾಣಿಕರ ಹೆಚ್ಚಳಕ್ಕೆ ತಕ್ಕಂತೆ ಬಸ್‌ಗಳ ಸಂಖ್ಯೆಯನ್ನು ಏರಿಕೆಯಾಗಿಲ್ಲ.

ಕೆಲ ಮಾರ್ಗಗಳಲ್ಲಿ ಬಸ್ ಸಂಚಾರ ರದ್ದು ಅಥವಾ ಸಂಚಾರ ಮಾರ್ಗವನ್ನೇ ಬದಲಿಸಲಾಗಿದೆ. ಟ್ರಿಪ್‌ಗಳ ಸಂಖ್ಯೆ ಇಳಿಕೆ ಮಾಡಲಾಗಿದೆ. ಕೆಲ ಹಳ್ಳಿಗಳಿಗೆ ಬಸ್‌ಗಳು ಹೋಗುತ್ತಿಲ್ಲ. ನಿಗದಿತ ಸಮಯಕ್ಕೆ ಬಸ್‌ಗಳೂ ಬರುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಅಲ್ಲದೆ, ಬಸ್‌ನ ಆಸನ ಸಾಮರ್ಥ್ಯಕ್ಕೆ ಮೀರಿ ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಇದು ಬಸ್‌ಗಳ ಮೇಲೆ ಒತ್ತಡವನ್ನು ದ್ವಿಗುಣಗೊಳಿಸಿದೆ. ನಿಧಾನಗತಿಯಲ್ಲಿ ದುಸ್ಥಿತಿಯತ್ತ ಮುಖ ಮಾಡುತ್ತಿವೆ. ಇಲ್ಲಿರುವ ಬಹಳಷ್ಟು ಹಳೇ ಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಾಗಿಸಲು ಏದುಸಿರು ಬಿಡುತ್ತಿವೆ ಎಂದು ಹುಣಸೂರಿನ ಯಶವಂತ್ ತಿಳಿಸಿದರು.


ಅಶ್ವಮೇಧ ಬಸ್‌ಗೆ ಬಲು ಡಿಮಾಂಡ್..!

ಶಕ್ತಿ ಯೋಜನೆಯಿಂದ ಅಶ್ವಮೇಧ-ಕ್ಲಾಸಿಕ್ ಬಸ್‌ಗಳಿಗೆ ಬೇಡಿಕೆ ಬಂದಿದೆ. ದೂರ ಪ್ರಯಾಣಕ್ಕೆ ಅನುಕೂಲಕರವಾಗಿರುವ ಈ ಬಸ್‌ನಲ್ಲಿ ಪ್ರಯಾಣಿಸಲು ಜನರು ಮುಗ್ಗಿಬೀಳುತ್ತಾರೆ. ಜಿಲ್ಲೆಯಲ್ಲಿ 41 ಅಶ್ವಮೇದ ಬಸ್‌ಗಳಿವೆ.

ಸಾಮಾನ್ಯ ಬಸ್‌ಗಿಂತ ಇದು ಒಂದು ಅಡಿ ಎತ್ತರ ಜಾಸ್ತಿ ಇರುವುದರಿಂದ ಗಾಳಿ-ಬೆಳಕು ಚೆನ್ನಾಗಿ ಬರುತ್ತದೆ. ಬಕೆಟ್ ಸೀಟ್‌ಗಳಿರುವುದರಿಂದ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದು. ಅದಕ್ಕಾಗಿ ಈ ಬಸ್‌ಗಳಿಗೆ ಬೇಡಿಕೆ ಹೆಚ್ಚು. ಇವುಗಳನ್ನು ನಗರ ಸಂಚಾರಕ್ಕೆ ಬಳಕೆ ಇಲ್ಲ.

ದೂರ ಊರುಗಳಾದ ಮೈಸೂರು-ಬೆಂಗಳೂರು, ನಂಜನಗೂಡು-ಮೈಸೂರು- ಬೆಂಗಳೂರು, ನಂಜನಗೂಡು-ತಿ.ನರಸೀಪುರ-ಬೆಂಗಳೂರು, ಎಚ್.ಡಿ.ಕೋಟೆ- ಬೆಂಗಳೂರು, ಹುಣಸೂರಿನಿಂದ ಬೆಂಗಳೂರಿಗೆ, ಮೈಸೂರಿನಿಂದ ಹಾಸನಕ್ಕೆ, ಮೈಸೂರಿನಿಂದ ವಿರಾಜಪೇಟೆ ಹೀಗೆ ವಿವಿಧ ಮಾರ್ಗದಲ್ಲಿ ಈ ಬಸ್‌ಗಳು ಸಂಚರಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net