

ವಿಜಯವಾಣಿ ವಿಶೇಷ ಕೊಪ್ಪಳ
ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅಂತರಾಜ್ಯದಿಂದಲೂ ದೌರ್ಜನ್ಯಕ್ಕೊಳಗಾಗಿ ಕೊಪ್ಪಳಕ್ಕೆ ಬಂದಿದ್ದ ಹಲವು ಮಹಿಳೆಯರನ್ನು ಅಧಿಕಾರಿಗಳು ಸುರಕ್ಷಿತವಾಗಿ ಕುಟುಂಬ ತಲುಪಿಸಿದ್ದಾರೆ. ಗಂಡನೊಂದಿಗೆ ಜಗಳವಾಡಿಕೊಂಡು ತವರಿಗೆ ತೆರಳುವ ಬದಲು ಅಚಾನಕ್ ಆಗಿ ಕೊಪ್ಪಳಕ್ಕೆ ಬಂದಿದ್ದ ಮಹಿಳೆಯೋರ್ವಳನ್ನು ಸಖಿ ಘಟಕ ಅಧಿಕಾರಿಗಳು ಹಾಗೂ ಪೊಲೀಸರು ಸುರಕ್ಷಿತವಾಗಿ ತವರಿಗೆ ಸೇರಿಸಿದ್ದಾರೆ.
ಮಾನಸಿಕ ಅಸ್ವಸ್ಥತೆ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಅಪರಾಧ, ಲೈಂಗಿಕ ದುರುಪಯೋಗ, ಬಾಲ್ಯ ವಿವಾಹ, ಮಹಿಳೆ ಸಾಗಣೆ, ವರದಕ್ಷಿಣೆ ಕಿರಕುಳ ಹೀಗೆ ಹಲವು ವಿಧಗಗಳಲ್ಲಿ ದೌರ್ಜನ್ಯಗಳಾಗುತ್ತಿವೆ. ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಖಿ ಘಟಕ ಮೂಲಕ ನೆರವಾಗುತ್ತಿದೆ. ೨೦೧೯ರಿಂದ ಘಟಕ ಅಸ್ತಿತ್ವಕ್ಕೆ ಬಂದಿದೆ. ಕೊಪ್ಪಳ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಲವು ಇಲಾಖೆಗಳು ಪೂರಕವಾಗಿ ಕೆಲಸ ಮಾಡುತ್ತಿವೆ. ವಾರದ ಹಿಂದಷ್ಟೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮಲಕಾರಿ ರಾಮಪ್ಪ ಒಡೆಯರ್ ನೇತೃತ್ವದಲ್ಲಿ ಇಬ್ಬರು ಮಾನಸಿಕ ಅಸ್ವಸ್ಥ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ಸಖಿ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಹಾಗೂ ಆಪಸ್ತ ಸಮಾಲೋಚನೆ ನಡೆಸಲಾಗುತ್ತಿದೆ. ಇನ್ನು ಸಖಿ ಘಟಕಕ್ಕೆ ದಾಖಲಾಗುವ ಮಹಿಳೆಯರ ವಿವರ ಪರಿಶೀಲಿಸಿದಲ್ಲಿ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಕಂಡುಬರುತ್ತಿದೆ. ಮೊದಲಿನಷ್ಟು ಗಂಭೀರ ಪ್ರಕರಣಗಳು ಇರದಿದ್ದರೂ ಮಾನಸಿಕ ಅಸ್ವಸ್ಥತೆ, ದೌರ್ಜನ್ಯ ಕಾರಣ ಮಹಿಳೆಯರು ಸಖಿ ಘಟಕದ ನೆರವು ಕೋರುವಂತಾಗಿದೆ. ೨೦೧೯-೨೦ರಲ್ಲಿ ೪೮ ಪ್ರಕರಣಗಳು ವರದಿಯಾಗಿವೆ. ೨೦೨೦-೨೧ರಲ್ಲಿ ೨೪, ೨೦೨೧-೨೨ರಲ್ಲಿ ೨೧೪, ೨೦೨೨-೨೩ರಲ್ಲಿ ೨೪೪ ಹಾಗೂ ೨೦೨೩ರಿಂದ ೨೦೨೪ರ ಜನೆವೆರಿ ಅಂತ್ಯದವರೆಗೆ ೨೧೨ ಪ್ರಕರಣಗಳು ಘಟಕದ ಮೆಟ್ಟಿಲೇರಿವೆ. ಬಹುಪಾಲು ಪ್ರಕರಣಗಳಲ್ಲಿ ಮಹಿಳೆರಿಗೆ ಆಪ್ತ ಸಮಾಲೋಚನೆ ನಡೆಸಿ, ಕಾನೂನು ನೆರವು ನೀಡಿ ಹೊಂದಾಣಿಕೆ ಮಾಡಲಾಗಿದೆ.
ಅನಾಥರನ್ನು ಮಹಿಳಾ ವಸತಿ ನಿಲಯ ಅಥವಾ ಸಂಬಂಧಿಗಳ ಸುಪರ್ದಿಗೆ ಒಪ್ಪಿಸಲಾಗಿದೆ. ಈ ನಡುವೆ ವಿವಿಧ ರಾಜ್ಯಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಜಿಲ್ಲೆಗೆ ಆಗಮಿಸುವ ಪ್ರಕರಣಗಳು ಹೆಚ್ಚಿವೆ. ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ವಿವಿಧೆಡೆ ನೆಲೆಸಿದ್ದ ನಾಲ್ವರು ಮಹಿಳೆಯರನ್ನು ಆರೈಕೆ ಮಾಡಲಾಗಿದೆ. ಅವರ ಕುಟುಂಬದವರನ್ನು ಪತ್ತೆ ಮಾಡಿ ಕಾನೂನಾತ್ಮಕವಾಗಿ ಸುಪರ್ದಿಗೆ ಒಪ್ಪಿಸಲಾಗಿದೆ. ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಮಹಿಳೆಯರು ಇವರಾಗಿದ್ದಾರೆ. ಮಹಿಳೆಯರ ಜಿಲ್ಲೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಮೂಲಕ ಅವರ ಕುಟುಂಬದೊಂದಿಗೆ ಸೇರಿಸಲಾಗಿದೆ. ಇನ್ನು ದೌರ್ಜನ್ಯ ಸೇರಿ ಕಾರಣಗಳಿಗೆ ಮನೆ ತೊರೆದ ೧೫ ಅಂತರ್‌ಜಿಲ್ಲಾ ಮಹಿಳೆಯರನ್ನು ಮರಳಿ ಅವರ ಮನೆ ಸೇರಿಸಲಾಗಿದೆ.
ಮರಳಿ ಗೂಡು ಸೇರಿದ ಮಧ್ಯಪ್ರದೇಶ ಮಹಿಳೆ
ಗಂಡನ ಕಿರುಕುಳಕ್ಕೆ ಬೇಸತ್ತ ಮಧ್ಯ ಪ್ರದೇಶದ ಮಹಿಳೆಯೊಬ್ಬಳು ಮನೆಯವರಿಗೆ ಗೊತ್ತಾಗದಂತೆ ಮನೆ ತೊರೆದಿದ್ದಾಳೆ. ತವರಿಗೆ ತೆರಳುವುದು ಬಿಟ್ಟು ಅಚಾನಕ್ ಆಗಿ ಕೊಪ್ಪಳ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ಅನುಮಾನಾಸ್ಪದವಾಗಿ ಕಂಡ ಮಹಿಳೆಯನ್ನು ಮಹಿಳಾ ಪೊಲೀಸ್ ಕೊಟ್ರಮ್ಮ ವಿಚಾರಿಸಿದಾಗ ಮನೆ ಬಿಟ್ಟು ಬಂದ ಬಗ್ಗೆ ತಿಳಿದಿದೆ. ಸಖಿ ಘಟಕಕ್ಕೆ ದಾಖಲಿಸಿ ಆಪ್ತ ಸಮಾಲೋಚನೆ ನಡೆಸಿದಾಗ ಗಂಡನ ದೌರ್ಜನ್ಯ ಬಗ್ಗೆ ತಿಳಿಸಿದ್ದಾಳೆ. ಅವರ ಅಣ್ಣಂದಿರನ್ನು ಸಂಪರ್ಕಿಸಿದ ಸಖಿ ಘಟಕ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ನಂತರ ಮಧ್ಯ ಪ್ರದೇಶದ ಸಪ್ನಾ ಜಿಲ್ಲೆ ಅಧಿಕಾರಿಗಳನ್ನು ಸಂಪರ್ಕಿಸಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಬಂದ ಮಹಿಳೆ ಅಣ್ಣಂದಿರು ಮಹಿಳೆಯನ್ನು ಕರೆದೊಯ್ದಿದ್ದಾರೆ. ಬಳಿಕ ಪೊಲೀಸರ ಮೂಲಕ ಗಂಡನಿಗೆ ಎಚ್ಚರಿಕೆ ನೀಡಿಸಿ ಮಹಿಳೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಮುಚ್ಚಳಿಕೆ ಬರೆಸಿಕೊಂಡು ಕುಟುಂಬ ಸೇರಿಸಲಾಗಿದೆ.