

ಉಡುಪಿ: ಇಪ್ಪತ್ತರ ಒಳಗಿನ ಹರೆಯದ ಯುವತಿಯರ ಫುಟ್ಬಾಲ್ ತಂಡ 2026ರಲ್ಲಿ ಥೈಲ್ಯಾಂಡಿನಲ್ಲಿ ಜರುಗಲಿರುವ ಏಷಿಯಾ ಕಪ್ ಫುಟ್ಬಾಲ್ ಪಂದ್ಯಾಟಕ್ಕೆ ಸಿದ್ಧತೆ ನಡೆಸುತ್ತಿದ್ದು, ಉಡುಪಿ ಮೂಲದ ವಲ್ಲರಿ ಪೆಜತ್ತಾಯ ರಾವ್ ಫಿಸಿಯೊ ಆಗಿ ಆಯ್ಕೆಯಾಗಿದ್ದಾರೆ.
ರಾಜೀವ್ ಗಾಂಧಿ ವಿವಿಯಲ್ಲಿ ಸ್ಪೋರ್ಟ್ಸ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಲ್ಲರಿ ಅವರು, ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ತಂಡದಲ್ಲಿ ಫಿಸಿಯೊ ಆಗಿ ಸೇವೆ ಸಲ್ಲಿಸಿದ್ದರು. ಇದನ್ನು ಗಮನಿಸಿದ ಆಲ್ ಇಂಡಿಯಾ ಫುಟ್ಬಾಲ್ಡ ಫೆರೇಶನ್ ಏಷಿಯಾ ಕಪ್ ಫುಟ್ಬಾಲ್ ತಂಡಕ್ಕೆ ನೇಮಕಗೊಳಿಸಿದೆ.
ಏಷಿಯಾ ಕಪ್ ಪಂದ್ಯಾಟಕ್ಕೆ ಮುನ್ನ ಆಗಸ್ಟ್ ತಿಂಗಳಲ್ಲಿ ಮ್ಯಾನ್ಮಾರ್ನಲ್ಲಿ ನಡೆಯಲಿರುವ ಅರ್ಹತಾ ಪಂದ್ಯದಲ್ಲಿ ಉತ್ಕಷ್ಟ ಪ್ರದರ್ಶನವನ್ನು ನೀಡಬೇಕಾಗಿದೆ. ಇಂಡೋನೇಷಿಯಾ, ತುರ್ಕಮೆನಿಸ್ತಾನ್ ಹಾಗೂ ಮ್ಯಾನ್ಮಾರ್ ಜೊತೆ ಅಧಿಕೃತ ಪಂದ್ಯಾಟದಲ್ಲಿ ಗೆಲುವು ದಾಖಲಿಸಬೇಕಿದೆ. ಇದಕ್ಕಾಗಿ ಹುಡುಗಿಯರ ತಂಡ ಕಠಿಣ ಅಭ್ಯಾಸದಲ್ಲಿ ನಿರತವಾಗಿದ್ದು, ಮೇ 25ರಿಂದ ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸ್ಪೋರ್ಟ್ಸ ಸೆಂಟರ್ನಲ್ಲಿ ವಿಶೇಷ ತರಬೇತಿ ಪ್ರಾರಂಭವಾಗಿದ್ದು, ಆ.15ರವರೆಗೆ ನಡೆಯಲಿದೆ.
ತಾಷ್ಕೆಂಟಿನಲ್ಲಿ ವಿಜಯ
ಒಟ್ಟು 24 ಸದಸ್ಯರನ್ನು ಹೊಂದಿರುವ 20ರ ಒಳಗಿನ ಹರೆಯದ ಭಾರತೀಯ ಹುಡುಗಿಯರ ಫುಟ್ಬಾಲ್ ತಂಡ ದೆಹಲಿ, ಮಣಿಪುರ, ಜಾರ್ಖಂಡ್, ಓರಿಸ್ಸಾ ರಾಜ್ಯದ ಪ್ರತಿಭಾವಂತ ಆಟಗಾರನ್ನು ಹೊಂದಿದ್ದು, ಜಾಗತಿಕಮಟ್ಟದಲ್ಲಿ ಹೆಸರುಗಳಿಸಿರುವ ಸ್ವೀಡನಿನ ಜೋಕೀಂ ಅಲೆಕ್ಸಾಂಡರ್ಸನ್ ಮಾರ್ಗದರ್ಶನ ಹಾಗೂ ತರಬೇತಿ ನೀಡುತ್ತಿದ್ದಾರೆ. ಜುಲೈ 10ರಿಂದ 17ರವರೆಗೆ ಉಜ್ಬೇಕಿಸ್ತಾನದ ತಾಷ್ಕೆಂಟಿನಲ್ಲಿ ವಿಶೇಷ ಪ್ರದರ್ಶನ ನೀಡಿದ ಈ ತಂಡ ಎರಡು ಸೌಹಾರ್ದ ಪಂದ್ಯಾಟದಲ್ಲಿ ಮೊದಲ ಪಂದ್ಯದಲ್ಲಿ 1&-1 ಅಂತರದಲ್ಲಿ ಸಮಬಲ ಸಾಧಿಸಿತು. ಎರಡನೇ ಪಂದ್ಯದಲ್ಲಿ ಬಲಿಷ್ಠ ಉಜ್ಬೇಕಿಸ್ತಾನದ ವಿರುದ್ಧ 4-&1 ಅಂತರದಲ್ಲಿ ರೋಚಕ ವಿಜಯವನ್ನು ದಾಖಲಿಸಿದೆ. ಈ ಫುಟ್ಬಾಲ್ ತಂಡದ ದೈಹಿಕಕ್ಷಮತಾ ತಜ್ಞರಾಗಿ ವಲ್ಲರಿ ರಾವ್ (ಫಿಸಿಯೊ)ತಂಡದ ಜೊತೆಗಿದ್ದರು.
ಉಡುಪಿ ಒಳಕಾಡು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಾದಿರಾಜ ಹಾಗೂ ಸಹನಾ ಪೆಜತ್ತಾಯ ಪುತ್ರಿ ವಲ್ಲರಿ ಪೆಜತ್ತಾಯ ರಾವ್ ಅವರು ಡಾ.ವಿಶಾಕ್ ರಾವ್ ಅವರನ್ನು ವಿವಾಹವಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.