

ವಿಜಯವಾಣಿ ಸುದ್ದಿಜಾಲ ತಿಪಟೂರು
ಸ್ತ್ರೀಶಕ್ತಿ ಒಕ್ಕೂಟಗಳು ಮತ್ತು ಸ್ತ್ರೀ ಸಬಲೀಕರಣ ಹೆಚ್ಚಾದಂತೆ, ಸಮಾಜದಲ್ಲಿ ಮಹಿಳಾ ಪ್ರಧಾನ ವ್ಯವಸ್ಥೆಯೂ ಮುನ್ನಲೆಗೆ ಬರುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ನಗರದ ಕಲ್ಪತರು ಸಭಾಂಗಣದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಸ್ತ್ರೀಶಕ್ತಿ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದ ಮೋಟಮ್ಮ ಅವರು ಒತ್ತು ನೀಡಿದ್ದ ಮಹಿಳಾ ಸಬಲೀಕರಣದ ಪರಿಕಲ್ಪನೆಯಿಂದ ಜಾರಿಗೆ ತರಲಾದ ಸ್ತ್ರೀಶಕ್ತಿ ಒಕ್ಕೂಟ ಇಂದು ವಿಶಾಲ ವೃಕ್ಷವಾಗಿ ಬೆಳೆದಿದೆ. ಇದರಿಂದ ಪುರುಷ ಪ್ರಧಾನ ವ್ಯವಸ್ಥೆ ನಿಯಂತ್ರಣದಲ್ಲಿದ್ದು, ಅಡುಗೆ ಮನೆಗೆ ಸೀಮಿತರಾಗಿದ್ದ ಸ್ತ್ರೀಯರು ಇಂದು ಸಮಾಜದ ಎಲ್ಲ ರಂಗಗಳಲ್ಲೂ ಗುರುತಿಸಿಕೊಳ್ಳುವಂತಾಗಿದೆ. ಹಿಂದಿನ ಮತ್ತು ಈಗಿನ ವಾತಾವರಣದಲ್ಲಿ ಬಹಳಷ್ಟು ವ್ಯತ್ಯಾಸ ಉಂಟಾಗಿವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಚೇತನ್ಕುಮಾರ್ ಮಾತನಾಡಿ, 2000&01ರಲ್ಲಿ ಜಾರಿಗೆ ಬಂದ ಸ್ತ್ರೀಶಕ್ತಿ ಸಂಘಗಳ ರಚನೆ ಮತ್ತು ನಂತರದ ದಿನಗಳಲ್ಲಾದ ಮಹಿಳಾ ಸಬಲೀಕರಣದಿಂದ ಮಹಿಳೆಯರು ಇಂದು ಮನೆಯಿಂದ ಹೊರಬರುವ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರದ ಯೋಜನೆಗಳಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ಸಿಗುತ್ತಿರುವ ಕಾರಣ ಮೈಕ್ರೋ ಫೈನಾನ್ಸ್ಗಳ ಕಿರುಕುಳದಿಂದ ಮಹಿಳೆಯರು ಪಾರಾಗುವಂತಾಗಿದೆ. ಸ್ತ್ರೀಶಕ್ತಿ ಒಕ್ಕೂಟ ಮತ್ತು ಸಂಘಗಳು ತಾಲೂಕಿನಲ್ಲಿ ಹೆಚ್ಚು ಆರ್ಥಿಕ
ಅಭಿವೃದ್ಧಿ ಸಾಧಿಸಿದ್ದು, ಮುಂದಿನ ದಿನಗಳಲ್ಲಿ ನಿಮ್ಮದೇ ಸ್ವಂತ ಬ್ಯಾಂಕ್ ಸ್ಥಾಪಿಸುವ ಮೂಲಕ ಆರ್ಥಿಕಾಭಿವೃದ್ಧಿ ಹೊಂದಿ ಎಂದು ಕರೆ ನೀಡಿದರು.
ಸಾಧಕರಿಗೆ ಸನ್ಮಾನ: 14ನೇ ವರ್ಷದಲ್ಲೇ ಆರೋಗ್ಯ ಸಮಸ್ಯೆಯಿಂದ ಅಂಗವೈಕಲ್ಯಕ್ಕೆ ತುತ್ತಾಗಿದ್ದರೂ, ದೃಢ ಸಂಕಲ್ಪದಿಂದ ಆಯುರ್ವೇದ ವೈದ್ಯರಾಗಿ ತಾಲೂಕಿನ ಕೊನೇಹಳ್ಳಿ ಆಯುರ್ವೇದ ಆಸ್ಪತ್ರೆಯಲ್ಲಿ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ.ಟಿ.ಎಂ.ಸುಮನಾ, ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಪಿ.ರೇಖಾ, ಹಾಗೂ 78ರ ಇಳಿವಯಸ್ಸಿನಲ್ಲೂ ಸೋಬಾನೆ ಪದ ಮತ್ತು ಭಜನೆ ನಡೆಸಿಕೊಡುತ್ತಿರುವ ತಾಲೂಕಿನ ಕನ್ನುಘಟ್ಟದ ಸಾವಿತ್ರಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕಿನಲ್ಲಿ 1080 ಸ್ತ್ರೀಶಕ್ತಿ ಗುಂಪುಗಳು: ತಿಪಟೂರು ತಾಲೂಕಿನಲ್ಲಿ ರಚನೆಯಾಗಿರುವ ಒಟ್ಟು ಸ್ತ್ರೀಶಕ್ತಿ ಗುಂಪುಗಳು 1080. ಇದರಲ್ಲಿನ ಸದಸ್ಯರ ಸಂಖ್ಯೆ 16,558. ಇಲ್ಲಿವರೆಗೂ ಮಾಡಿರುವ ಒಟ್ಟು ಉಳಿತಾಯ 551 ಲಕ್ಷ ರೂ. ಬ್ಯಾಂಕ್ ಮತ್ತು ಗುಂಪಿನಿಂದ ನೀಡಿದ ಸಾಲದ ಮೊತ್ತ 890 ಲಕ್ಷ ರೂ. ಆಗಿದ್ದು, ಸಾಲ ಮರುಪಾವತಿ. 882 ಲಕ್ಷ ರೂ. ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಎನ್.ಚೇತನಕುಮಾರ್ ತಿಳಿಸಿದರು.
ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಕಾಯ್ದೆಗೆ ರಾಷ್ಟ್ರಪತಿ ಅಂಗೀಕಾರದ ಮುದ್ರೆ ಒತ್ತಿದ್ದಾರೆ. ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳು ಮಹಿಳೆಯರ ಪಾಲಾಗಲಿದ್ದು, ಅದರಲ್ಲಿ ಮೊದಲನೆಯದ್ದು ತಿಪಟೂರು ವಿಧಾನಸಭಾ ಕ್ಷೇತ್ರವಾಗಿದೆ. ತಾಲೂಕಿಗೆ ನಾನೇ ಕೊನೆಯ ಪುರುಷ ಶಾಸಕ, ಮುಂದೇನಿದ್ದರೂ ಈ ಕ್ಷೇತ್ರ ಮಹಿಳೆಯರ ಪಾಲಾಗಲಿದೆ. ನನ್ನ ಪತ್ನಿಯಂತೂ ರಾಜಕೀಯಕ್ಕೆ ಬರಲ್ಲ. ಬಹುಷ ನಾನು ಲೋಕಸಭಾ ಕ್ಷೇತ್ರದತ್ತ ಗಮನಹರಿಸಬೇಕಾಗುತ್ತೆ. | ಕೆ.ಷಡಕ್ಷರಿ ಶಾಸಕ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಂದ ಆದಾಯೋತ್ಪನ್ನ ಉದ್ದೇಶಕ್ಕೆ ಮಾತ್ರ ಸಾಲ ಪಡೆಯಿರಿ. ವೈಯಕ್ತಿಕ ಮೋಜು, ಮಸ್ತಿ ಮಾಡಲು ಸಾಲ ಪಡೆದರೆ, ಕೊನೆಗೆ ಸಾಲಮಾಡಿ ಚಿನ್ನ ಖರೀದಿಸಿ, ನಂತರ ಚಿನ್ನ ಮಾರಿ ಸಾಲದ ಬಡ್ಡಿ ಕಟ್ಟುವ ಪ್ರಮೇಯ ಬರುತ್ತದೆ. ಯೋಚಿಸಿ ಸಾಲ ಪಡೆಯಿರಿ. | ಎಂ.ಎನ್.ಚೇತನಕುಮಾರ್,ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ