

ಬೆಳಗಾವಿ: ಮಹಿಳೆಯರು ಕುಟುಂಬವನ್ನು ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುತ್ತಾರೆ. ಜತೆಗೆ ಸ್ವ-ಸಹಾಯ ಸಂಘ ರಚಿಸಿಕೊಂಡು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಆದರೆ, ಇಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನಕ್ಕೂ ಮಹಿಳೆಯರು ಹೊಂದಿಕೊಳ್ಳುವ ಅಗತ್ಯವಿದೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತೆ (ಆಡಳಿತ) ಕವಿತಾ ಯೋಗಪ್ಪನವರ ಹೇಳಿದ್ದಾರೆ.
ದೀನ್‌ದಯಾಳ್ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ರಚಿಸಿರುವ ಸ್ವ-ಸಹಾಯ ಸಂಘ, ಪ್ರದೇಶ ಮತ್ತು ನಗರ ವ್ಯಾಪ್ತಿಯ ಒಕ್ಕೂಟಗಳ ಸದಸ್ಯರಿಗೆ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಡಿಜಿಟಲ್ ಪೇಮೆಂಟ್’ ಸಾಕ್ಷರತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಡಿಜಿಟಲ್‌ಮಯವಾಗುತ್ತಿದೆ. ಸ್ವ-ಸಹಾಯ ಸಂಘಗಳ ಮಹಿಳೆಯರು ಡಿಜಿಟಲ್ ಪೇಮೆಂಟ್ ಕುರಿತು ತಿಳಿದುಕೊಳ್ಳಬೇಕು. ಇಡೀ ದೇಶವೇ ಡಿಜಿಟಲ್ ಕ್ಷೇತ್ರಕ್ಕೆ ಹೊರಳುತ್ತಿದೆ. ಹೀಗಾಗಿ ಸ್ವ-ಸಹಾಯ ಸಂಘಗಳ ಮಹಿಳೆಯರು ಡಿಜಿಟಲ್ ಪೇಮೆಂಟ್ ಬಗ್ಗೆ ತಿಳಿದುಕೊಂಡು ಆ ಕಾರ್ಯದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ತರಬೇತುದಾರ ವಿಶಾಲ್ ಎನ್. ಮಾತನಾಡಿ, ಸ್ವ-ಸಹಾಯ ಸಂಘಗಳ ಮಹಿಳೆಯರು ನಗದು ರಹಿತ ವ್ಯವಹಾರದ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಬಳಿಕ ಡಿಜಿಟಲ್ ಪೇಮೆಂಟ್, ಡೆಬಿಟ್ ಕಾರ್ಡ್, ಭೀಮ್ ಆನ್‌ಲೈನ್ ಟ್ರಾಂಜಾಕ್ಷನ್, ಆನ್‌ಲೈನ್‌ನಲ್ಲಿ ಬಿಲ್‌ಗಳ ಪಾವತಿ ಹಾಗೂ ಡಿಜಿಟಲ್ ಪೇಮೆಂಟ್‌ನ ಉಪಯೋಗ ಮತ್ತು ಮುನ್ನೆಚ್ಚರಿಗೆ ಕ್ರಮಗಳ ಕುರಿತು ಸದಸ್ಯರಿಗೆ ವಿವರಿಸಿದರು. ಪಾಲಿಕೆ ಉಪ ಆಯುಕ್ತ (ಕಂದಾಯ) ಎಸ್.ಬಿ. ದೊಡಗೌಡರ, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ ಚೇತನಾ ಎಂ.ಕೆ., ಸಮುದಾಯ ಸಂಘಟನಾ ಅಧಿಕಾರಿಗಳಾದ ಪುನೀತಾ ಎಮ್ಮಿ, ರೇಖಾ ಕುಲಕರ್ಣಿ, ಅಭಿಯಾನ ವ್ಯವಸ್ಥಾಪಕ ಡಾ.ಸಂಜಯ ತಿಗಣಿ ಮತ್ತಿತರರಿದ್ದರು.