

ಮೈಸೂರು: ಬ್ಯಾಂಕ್‌ಗಳಿಂದ ಸಾಲ ಪಡೆದುಕೊಳ್ಳುವ ಮಹಿಳೆಯರು ಉದ್ಯಮ ಆರಂಭಿಸಿ, ಉದ್ಯೋಗ ಸೃಷ್ಟಿ ಮಾಡುವ ದಿಕ್ಕಿನಲ್ಲಿ ಆಲೋಚಿಸುವಂತೆ ರಾಜ್ಯ ಸರ್ಕಾರದ ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕಿ ಪಿ.ಐ. ಶ್ರೀವಿದ್ಯಾ ಸಲಹೆ ನೀಡಿದರು.
ಕೆನರಾ ಬ್ಯಾಂಕ್‌ನಿಂದ ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಸಹಾಯ ಸಂಘಗಳಿಗೆ ಬೃಹತ್ ಸಾಲ ಸಂಯೋಜನೆ ಹಾಗೂ ಸಾಲ ವಿತರಣಾ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಶಕ್ತರಾಗಲು ಸಾಲ ಯೋಜನೆ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿವೆ. 580 ಸ್ವಸಹಾಯ ಸಂಘಗಳಿಗೆ 68 ಕೋಟಿ ರೂ. ಸಾಲ ನೀಡಿರುವುದು ಸಣ್ಣ ವಿಷಯವಲ್ಲ. ಕೆನರಾ ಬ್ಯಾಂಕ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಸಾಲ ಮೇಳದಲ್ಲಿ ಸಾಲ ತೆಗೆದುಕೊಂಡು ಉತ್ತಮವಾದ ಯೋಜನೆಗಳನ್ನು ಹಾಕಿಕೊಂಡು ಉದ್ಯಮ ಆರಂಭಿಸಿ, ಉತ್ತಮ ಲಾಭ ಗಳಿಸಿ. ಆದರೆ ನಿಮ್ಮ ಜೀವನ ನಿರ್ವಹಣೆಗೆ ಮಾತ್ರ ಸಾಲುವಷ್ಟು ಲಾಭ ಮಾಡಬೇಡಿ ಉದ್ಯಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯವ ರೀತಿ ಆಲೋಚಿಸಿ ಎಂದು ತಿಳಿಸಿದರು.
ಸ್ವಯಂ ಉದ್ಯೋಗ ಆರಂಭಿಸಲು ಬೇಕಿರುವ ತರಬೇತಿಯನ್ನು ನಮ್ಮ ಸಂಸ್ಥೆ ನೀಡಲಿದ್ದು, ಈಗಾಗಲೇ ಪ್ರತಿಯೊಂದು ಪಂಚಾಯಿತಿಗಳಲ್ಲಿ ಕೃಷಿ ಸಖಿ, ಪಶು ಸಖಿಯರು ತರಬೇತಿ ನೀಡಲಾಗುತ್ತಿದೆ. ಕೆಎಂಎಫ್ ಜತೆಗೆ ಒಪ್ಪಂದ ಮಾಡಿಕೊಂಡು ಮಹಿಳಾ ಸಹಕಾರ ಸಂಘವನ್ನು ಸಬಲೀಕರಣ ಮಾಡಲಾಗುತ್ತಿದೆ ಎಂದರು.
ಉತ್ತಮ ಆಲೋಚನೆ ಮತ್ತು ಯೋಜನೆಗಳೊಂದಿಗೆ ಉದ್ಯಮ ಆರಂಭಿಸಿ ನಿಮ್ಮ ಅಕ್ಕಪಕ್ಕದಲ್ಲಿರುವ ಮನೆಯವರಿಗೂ ಉದ್ಯೋಗ ಸೃಷ್ಟಿಸಿ ಅವರನ್ನು ಸ್ವಾವಲಂಬಿಗಳಾಗಿ ಮಾಡಿ. ಮಹಿಳೆಯರು ಸಹ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಹೇಳಿದರು.
ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಹಿಳೆಯರು ಸ್ವಾವಲಂಬನೆ ಸಾಧಿಸಲು ಕೆನರಾ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲಾಯಿತು. ವಿದ್ಯಾ ಜೋತಿ ಯೋಜನೆಯಲ್ಲಿ ಮಕ್ಕಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ, ರಸ್ತೆ ಬದಿಯಲ್ಲಿ ವ್ಯಾಪಾರಿಗಳಿಗೆ ಛತ್ರಿಗಳನ್ನು ನೀಡಲಾಯಿತು.
ಕೆನರಾ ಬ್ಯಾಂಕ್ ಕೇಂದ್ರ ಕಚೇರಿ ವಿಸಿ ವಿಂಗ್ ಪ್ರಧಾನ ವ್ಯವಸ್ಥಾಪಕಿ ಮಮತಾ ಜೋಶಿ, ವೃತ್ತ ಕಚೇರಿ ಪ್ರಧಾನ ವ್ಯವಸ್ಥಾಪಕ ಮಹೇಶ್ ಎಂ.ಪೈ ಇತರರು ಇದ್ದರು.