ಮಹಿಳೆಯರು ಗ್ರಾಮಸಭೆ ಸದುಪಯೋಗ ಪಡಿಸಿಕೊಳ್ಳಲಿ

upbr Grama sabhe
Published on

ಉಪ್ಪಿನಬೆಟಗೇರಿ: ಮಹಿಳೆಯರಿಗಾಗಿ ಮೀಸಲಿಟ್ಟ ಯೋಜನೆಗಳು ಅವರಿಗೆ ನ್ಯಾಯಯುತವಾಗಿ ತಲುಪಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಮಹಿಳಾ ಗ್ರಾಮ ಸಭೆ ಆಯೋಜಿಸಲಾಗುತ್ತಿದೆ. ಇಂತಹ ಸಭೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ನೋಡಲ್ ಅಧಿಕಾರಿ ಎಚ್.ಸಿ. ತಳವಾರ ತಿಳಿಸಿದರು.

ಸ್ಥಳೀಯ ವಿಠ್ಠಲ ಮಂದಿರದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಹಿಳಾ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮದಲ್ಲಿರುವ ವಿಠ್ಠಲ ಮಂದಿರ ಹಾಗೂ ಮಲ್ಲಿಕಾರ್ಜುನ ದೇವಸ್ಥಾನದ ಮೇಲ್ಛಾವಣಿ ಸಿಮೆಂಟ್ ಪದರು ಕಳಚಿ ಬೀಳುತ್ತಿದ್ದು, ಕೂಡಲೆ ದುರಸ್ತಿ ಮಾಡಬೇಕು ಎಂದು ಪಿಡಿಒ ಬಿ.ಎ. ಬಾವಾಕಾನವರ ಅವರಿಗೆ ಸೂಚಿಸಿದರು.

ಹನುಮನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಎಸ್.ಎಂ. ಬೋಂಗಾಳೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಜಂಕ್​ಫುಡ್ ಸೇವಿಸುವುದರಿಂದ ಅವರಲ್ಲಿ ಪೋಷಕಾಂಶದ ಕೊರತೆ ಉಂಟಾಗಿ ಆರೋಗ್ಯ ಸಮಸ್ಯೆ ಉಲ್ಬಣಿಸುತ್ತಿವೆ. ಹೀಗಾಗಿ ಪಾಲಕರು ಮಕ್ಕಳಿಗೆ ಮನೆಯಲ್ಲಿ ಪೌಷ್ಟಿಕಾಂಶಯುಕ್ತ ತರಕಾರಿ, ಹಾಲು, ಹಣ್ಣು ಸೇವಿಸುವಂತೆ ತಿಳಿ ಹೇಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ.ಅಧ್ಯಕ್ಷ ಬಸೀರ ಅಹ್ಮದ ಮಾಳಗಿಮನಿ ಮಾತನಾಡಿ, ಮಹಿಳೆಯರು ಇಂತಹ ಸಭೆ, ಶಿಬಿರಗಳಲ್ಲಿ ಹೆಚ್ಚೆಚ್ಚು ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಂಜೀವಿನಿ ಒಕ್ಕೂಟದ ಸದಸ್ಯೆ ಹೂವಮ್ಮ ಕಬ್ಬೂರ ಮಾತನಾಡಿ, ಮಹಿಳೆ ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಒಕ್ಕೂಟದಿಂದ ಹಲವಾರು ಜನರಿಗೆ ಬಡ್ಡಿ ರಹಿತ ಸಾಲ ನೀಡಲಾಗಿದೆ. ಜತೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಅದರ ಸದುಪಯೋಗ ಪಡೆಯಬೇಕು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸದಸ್ಯರಾದ ಮಹಾವೀರ ಅಷ್ಟಗಿ, ಮುಸ್ತಾಕ ನದಾಫ್, ಶಬ್ಬೀರಅಹ್ಮದ್ ಮಕಾಂದಾರ, ಸೋಮಲಿಂಗ ಅಂಗಡಿ, ಶೋಭಾ ಬೊಬ್ಬಿ, ವಿಜಯಲಕ್ಷ್ಮೀ ನವಲಗುಂದ, ಸಾಯಿರಾಬಾನು ಲಾಲ್ಮಿಯಾ, ವಿದ್ಯಾ ಲೋಲಿ, ನಾಗರತ್ನಾ ಬೆಳವಡಿ, ಕೌಸರ್ ಸಯ್ಯದ್ ಇತರರು ಉಪಸ್ಥಿತರಿದ್ದರು. ಗ್ರಾಪಂ ನೌಕರ ವಿರೂಪಾಕ್ಷಪ್ಪ ಬಮ್ಮಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net