

ಮೈಸೂರು: ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಶ್ರೀರಾಂಪುರದ ನವೋದಯ ಚಾರಿಟಬಲ್ ಸೊಸೈಟಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಸಮಾನತೆ ಬರಬೇಕಾದರೆ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ದೊರೆಯಬೇಕು ಎಂದರು.
ಪ್ರಸ್ತುತ ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲೂ ತಮ್ಮ ಸಾಧನೆ ತೋರ್ಪಡಿಸುತ್ತಿದ್ದರೂ ಅವರ ಸಂಖ್ಯೆ ಬಹಳ ಕಡಿಮೆ ಇದೆ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡುವ ಅವಶ್ಯಕತೆ ಇದೆ. ಹೆಣ್ಣು ಮಕ್ಕಳು ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಸೊಸೈಟಿ ಪದಾಧಿಕಾರಿಗಳಾದ ದೇವಸ್ಸಿ ಕಾಡ ಪರಂಬಿಳ್, ಉಷಾದೇವಿ, ಶೈನಿ ಮಂಗರಿಲ್, ವೀಣಾ ವಿಲಿಯಂ, ಶೋಭಾ, ದಿನೇಶ್, ದಿನೇಶ್ ಗೌಡ, ಫಾದರ್ ಜಾನ್ ಪೀಟರ್, ಸಿಸ್ಟರ್ ಜ್ಯೋತಿ, ಸ್ವಾಮಿ ಇದ್ದರು.