ಮಹಿಳೆಯರು ಆತ್ಮವಿಶ್ವಾಸ ಹೊಂದಬೇಕು : ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಕರೆ

womens day
Published on

ಮೈಸೂರು: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಗುರುತಿಸಿಕೊಳ್ಳಲು ಸದೃಢ ಆತ್ಮವಿಶ್ವಾಸ ಹೊಂದಿರಬೇಕು. ಸಮಾಜದಲ್ಲಿ ಮಹಿಳೆಯರಿಗೆ ನಿರ್ಭೀತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಎಂ.ಕೆ. ಸವಿತಾ ಹೇಳಿದರು.

ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರವನ್ನು ಬಲಪಡಿಸುವಲ್ಲಿ ಮಹಿಳೆಯರು ಅತ್ಯಂತ ಮಹತ್ವದ ಪಾತ್ರವಹಿಸುತ್ತಾರೆ ಎಂದು ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಮಾತನಾಡಿ, ಸಮಾಜದಲ್ಲಿ ಸಮತೋಲನ ನಿರ್ಮಾಣ ಮಾಡಲು ಮಹಿಳೆಯರು ಮತ್ತು ಪುರುಷರು ಜತೆಯಾಗಿ ಸಾಗಬೇಕು. ಪುರುಷರಿಗಿಂತ ಮಹಿಳೆಯರು ಹೆಚ್ಚು ಸಹಾನುಭೂತಿ ಹೊಂದಿದ್ದಾರೆ. ಅದು ಅವರ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಲು ಸಹಕಾರಿಯಾಗಿದೆ. ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಪುರುಷರ ಪಾತ್ರವು ಮುಖ್ಯವಾದುದು ಎಂದರು.

ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಸಿಂಧೂರ ಗಂಗಾಧರ್ ಮಾತನಾಡಿ, ಮಹಿಳಾ ದಿನಾಚರಣೆ ಅನ್ನುವುದು ಸಂಭ್ರಮ ಮಾತ್ರವಲ್ಲ ಅದು ಒಂದು ಜವಾಬ್ದಾರಿ. ಹೆಣ್ಣು ಸಾಧನೆಯ ಹಾದಿಯಲ್ಲಿ ಬರುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಆತ್ಮಸ್ಥೈರ್ಯ ಹೊಂದಬೇಕು. ಹೆಣ್ಣು ಸ್ವತಂತ್ರವಾಗಿರಲು ಏಕೈಕ ಮಾರ್ಗವೆಂದರೆ ಶಿಕ್ಷಣ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಶ್ರೇಷ್ಠವಾದುದು ಎಂದು ತಿಳಿಸಿದರು.

ವೇದಿಕೆಯಲ್ಲಿ ಪ್ರಾಚಾರ್ಯ ಡಾ. ರೇಚಣ್ಣ, ಯೂತ್ ರೆಡ್‌ಕ್ರಾಸ್‌ನ ಸಂಚಾಲಕಿ ಎನ್. ನಾಗಲಾಂಬಿಕೆ, ಮಹಿಳಾ ಸಬಲೀಕರಣ ಕೋಶ ಸಂಚಾಲಕಿ ಪಿ.ವಸುಮತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net