ಮಹಿಳೆಯರು ಧೈರ್ಯವಂತರಾಗಿ ಜೀವನ ಸಾಗಿಸಬೇಕು

11-11-Shiva-2
ರಾಯಚೂರಿನ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ಡಿಎಚ್‌ಒ ಡಾ.ಸುರೇಂದ್ರ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಪಿಎಸ್‌ಐ ಮಂಜುನಾಥ ಇದ್ದರು.
Published on

ರಾಯಚೂರು: ಮಹಿಳೆಯರು ಯಾವುದಕ್ಕೂ ಹೆದರದೆ ಧೈರ್ಯವಂತರಾಗಿ ಜೀವನ ಸಾಗಿಸಬೇಕು. ಪ್ರಸ್ತುತ ದಿನಮಾನದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಓಬವ್ವರ ಸಾಹಸ, ಧೈರ್ಯ ಇಂದಿನ ಮಹಿಳೆಯರಿಗೆ ಆದರ್ಶಪ್ರಾಯವಾಗಬೇಕು ಎಂದರು.
ಚಿತ್ರದುರ್ಗದ ಕೋಟೆಯ ರಕ್ಷಣೆಗೆ ತನ್ನ ಪ್ರಾಣವನ್ನೆ ಪಣಕ್ಕಿಟ್ಟು ಹೋರಾಡಿದ ಒನಕೆ ಓಬವ್ವರ ಸಾಹಸಗಾಧೆ ಮತ್ತು ಆಕೆಯಲ್ಲಿನ ಮಾನವೀಯ ಅಂಶಗಳನ್ನು ಪ್ರತಿಯೊಬ್ಬರು ಅರಿತುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ರಾಯಚೂರು ವಿವಿ ಉಪನ್ಯಾಸಕ ಡಾ.ಮಲ್ಲೇಶ ಚಲವಾದಿ ಉಪನ್ಯಾಸ ನೀಡಿ, ಚಿತ್ರದುರ್ಗ ಸಂಸ್ಥಾನದಲ್ಲಿ ವೀರತ್ವವನ್ನು ಮೆರೆದು ವೀರ ವನಿತೆ ಎಂದು ಹೆಸರಾಗಿರುವ ಒನಕೆ ಓಬವ್ವ ಶತ್ರು ಸೈನ್ಯ ಕೋಟೆಗೆ ಮುತ್ತಿಗೆ ಹಾಕಿದಾಗ ಒನಕೆಯಿಂದಲೇ ಶತ್ರು ಸೈನ್ಯವನ್ನು ಸದೆಬಡಿದು ತನ್ನ ಜನರನ್ನು ಕಾಪಾಡಿದ್ದರು. ಅವರ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಇದಕ್ಕೂ ಮೊದಲು ಅಂಬೇಡ್ಕರ್ ವೃತ್ತದಿಂದ ಕನ್ನಡ ಭವನದವರೆಗೆ ಒನಕೆ ಓಬವ್ವ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮೆರವಣಿಗೆಗೆ ಚಾಲನೆ ನೀಡಿದರು. ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ನಗರಸಭೆ ಸದಸ್ಯ ಬಿ.ರಮೇಶ ಇದ್ದರು.
ಈ ಸಂದರ್ಭದಲ್ಲಿ ಡಿಎಚ್‌ಒ ಡಾ.ಸುರೇಂದ್ರಬಾಬು, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಪಿಎಸ್‌ಐ ಮಂಜುನಾಥ, ಮುಖಂಡ ಮಲ್ಲೇಶ ಕೊಲಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net