ಶೌರ್ಯವಾಹಿನಿ ಪಡೆ ಸಜ್ಜು

Women Police
Published on

ಬೆಂಗಳೂರು: ಸಿಲಿಕಾನ್ ಸಿಟಿ ಮಹಿಳಾ ಪೊಲೀಸರು ತಾವು ಯಾವುದಕ್ಕೂ ಕಮ್ಮಿ ಇಲ್ಲವೆಂದು ತೋರಿಸಲು ಸಜ್ಜಾಗಿದ್ದಾರೆ. ಇಲಾಖಾ ಕಚೇರಿ, ಕೋರ್ಟ್ ಸಂಬಂಧಿತ ಕೆಲಸಗಳಲ್ಲಿ ಮಾತ್ರ ಹೆಚ್ಚಾಗಿ ಸೀಮಿತರಾಗಿದ್ದ ಮಹಿಳಾ ಪೊಲೀಸರು, ಇನ್ನು ಮುಂದೆ ಚೀತಾ ಮತ್ತು ಹೊಯ್ಸಳ ವಾಹನಗಳಲ್ಲಿ ಗಸ್ತು ತಿರುಗಲಿದ್ದಾರೆ. ಇಂತಹ ದೊಂದು ‘ಶೌರ್ಯವಾಹಿನಿ’ ಪಡೆಯನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಜ್ಜುಗೊಳಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಇದಕ್ಕೆ ಪೂರಕವಾಗಿ ಮಹಿಳಾ ಪೊಲೀಸರು ಗಸ್ತು ವಾಹನ ಚಲಾಯಿಸಿ ಇತರರಿಗೆ ಪ್ರೇರಣೆ ದೊರೆಯುವಂತೆ ಮಾಡಲಾಗುತ್ತಿದೆ. ಆಸಕ್ತ ಮಹಿಳಾ ಅಧಿಕಾರಿ, ಸಿಬ್ಬಂದಿಗೆ ದ್ವಿಚಕ್ರ ವಾಹನ ಮತ್ತು ಕಾರು ಚಾಲನೆ ತರಬೇತಿ ನೀಡಲಾಗುತ್ತಿದೆ.

ಆಸಕ್ತರು ಹೆಸರು ನೀಡಿದರೆ ಹಂತ ಹಂತವಾಗಿ ಮೈಸೂರು ರಸ್ತೆಯ ಸಿಎಆರ್ ಕೇಂದ್ರ ವಿಭಾಗದ ವಾಹನ ಚಾಲನಾ ತರಬೇತಿ ಶಾಲೆಯಲ್ಲಿ 20 ದಿನಗಳ ತರಬೇತಿ ನೀಡಲಾಗುತ್ತದೆ. ಈಗಾಗಲೇ ವೇಳಾಪಟ್ಟಿ ಸಿದ್ದಪಡಿಸಿದ್ದು, ಬೈಕ್ ಮತ್ತು ಕಾರು ಚಾಲನೆ ಕುರಿತು ತರಬೇತಿ ನೀಡಿ ಅವರಿಗೆ ಚಾಲನಾ ಪರವಾನಗಿ ಕೊಡಲಾಗುತ್ತಿದೆ ಎಂದು ಸಿಎಆರ್ ಕೇಂದ್ರ ವಿಭಾಗ ಅಧಿಕಾರಿಗಳು ವಿಜಯವಾಣಿ ಗೆ ತಿಳಿಸಿದ್ದಾರೆ.

ಕರ್ತವ್ಯದಲ್ಲಿ 25 ಮಂದಿಯ ಪಡೆ

ನಗರದ ದಕ್ಷಿಣ ಮತ್ತು ಆಗ್ನೇಯ ವಿಭಾಗದ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗೆ ಮೊದಲ ಹಂತದಲ್ಲಿ ಡ್ರೖೆವಿಂಗ್ ತರಬೇತಿ ನೀಡಲಾಗುತ್ತಿದೆ. 25 ಮಂದಿ ತರಬೇತಿ ಮುಗಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2ನೇ ತಂಡಕ್ಕೆ ತರಬೇತಿ ನೀಡಲಾಗುತ್ತಿದೆ. ಪ್ರತಿಯೊಂದು ಠಾಣಾ ಮಹಿಳಾ ಪೊಲೀಸರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಮಹಿಳಾ ಅಧಿಕಾರಿ, ಸಿಬ್ಬಂದಿ ಚೀತಾ, ಪಿಂಕ್ ಹೊಯ್ಸಳ ಚಾಲನೆ ಮಾಡಿಕೊಂಡು ಗಸ್ತು ತಿರುಗುತ್ತಿದ್ದರೆ ಇತರ ಹೆಣ್ಣು ಮಕ್ಕಳಲ್ಲಿಯೂ ಧೈರ್ಯ ಬರಲಿದೆ. ಪುಂಡರಿಗೆ, ಕಾಮುಕರಿಗೆ ಭಯಹುಟ್ಟಲಿದೆ. ಜತೆಗೆ ಪೊಲೀಸ್ ಇಲಾಖೆಗೆ ಸೇರಲು ಹೆಚ್ಚು ಆಸಕ್ತಿ ತೋರಲಿದ್ದಾರೆ ಎಂಬ ಉದ್ದೇಶದಿಂದ ಮಹಿಳಾ ಪೊಲೀಸರಿಗೆ ಚಾಲನಾ ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net