ಮಹಿಳೆ ಬೆತ್ತಲೆಗೊಳಿಸಿ ಮೆರವಣಿಗೆ, ಕಂಬಕ್ಕೆ ಕಟ್ಟಿ ಥಳಿತ

Screenshot_2023-12-11-12-10-02-76.jpg
Published on

ಬೆಳಗಾವಿ: ತಾಲೂಕಿನ ಹೊಸ ಒಂಟಮೂರಿಯಲ್ಲಿ ಭಾನುವಾರ ರಾತ್ರಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿ, ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. 

ಗ್ರಾಮದ ಕಮಲವ್ವ ಗಡ್ಕರಿ (42) ಅಮಾನವೀಯ ಕೃತ್ಯಕ್ಕೆ ಒಳಗಾದ ಮಹಿಳೆ. ಮಹಿಳೆಯ ಪುತ್ರ ಯುವತಿಯನ್ನು ಪ್ರೀತಿಸಿ ಓಡಿಹೋಗಿದ್ದೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಮಲವ್ವ ಅವರ ಪುತ್ರ ದುಂಡಪ್ಪ ಹಾಗೂ ಇದೇ ಊರಿನ ಪ್ರಿಯಾಂಕ ಪ್ರೀತಿಸುತ್ತಿದ್ದರು. ಪ್ರಿಯಾಂಕ ಮನೆಯವರು ಇದಕ್ಕೆ ಒಪ್ಪದೇ, ಬೇರೊಬ್ಬ ವರನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಸೋಮವಾರ (ಡಿ.11) ಪ್ರಿಯಾಂಕ ಮದುವೆ ಕೂಡ ಗೊತ್ತಾಗಿತ್ತು. ಆದರೆ, ಭಾನುವಾರ ರಾತ್ರಿಯೇ ದುಂಡಪ್ಪ– ಪ್ರಿಯಾಂಕ ಮನೆ ಬಿಟ್ಟು ಓಡಿಹೋದರು.

ಇದರಿಂದ ಆಕ್ರೋಶಗೊಂಡಿದ್ದ ಯುವತಿ ಮನೆಯವರು ಯುವಕನ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದರು. ಬೆತ್ತಲೆ ಮಾಡಿ ಊರಿನ ಬೀದಿಗಳಲ್ಲಿ ಓಡಾಡಿಸಿದರು. ಕಂಬಕ್ಕೆ ಕಟ್ಟಿ ಮತ್ತೆ ಹೊಡೆದರು. ಅವರ ಮನೆಗೆ ಬೆಂಕಿ ಹಚ್ಚಿ ಅಪಾರ ಹಾನಿ ಮಾಡಿದ್ದಾರೆ.

ವಿಷಯ ತಿಳಿದ ಕಾಕತಿ ಪೊಲೀಸರು ತಡರಾತ್ರಿ ಗ್ರಾಮಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಸೋಮವಾರ ಬೆಳಗ್ಗೆ ಬಂಧಿಸಿ ವಶಕ್ಕೆ ಪಡೆದಿದ್ದಾರೆ.

ಓಡಿಹೋದ ಪ್ರೇಮಿಗಳಿಗೆ ಹುಡುಕಾಟ ನಡೆದಿದೆ. ಈ ಇಬ್ಬರೂ ಒಂದೇ ಜಾತಿಗೆ ಸೇರಿದವರಾಗಿದ್ದಾರೆ. ಇದು ಜಾತಿ ಸಂಘರ್ಷವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮದಲ್ಲಿ ಕೆಎಸ್‌ಆರ್‌ಪಿಯ ಎರಡು ತುಕಟಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net