

ಕೂಡ್ಲಿಗಿ: ಪ್ರತಿಯೊಬ್ಬರ ಸಮಗ್ರ ಅಭಿವೃದ್ಧಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಸಾರ್ವಜನಿಕ ಆಸ್ಪತ್ರೆಯ ಎನ್‌ಸಿಡಿ ಆಪ್ತ ಸಮಾಲೋಚಕಿ ಎನ್.ನಾಗರತ್ನಾ ಹೇಳಿದರು.
ಇದನ್ನೂ ಓದಿ:ಸ್ವಉದ್ಯೋಗದಿಂದ ಅಭಿವೃದ್ಧಿ
ಪಟ್ಟಣದ ರಾಮನಗರ ಮತ್ತು ಅಂಬೇಡ್ಕರ್ ನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಸಂಸ್ಥೆಯ ಯೋಜನೆಗಳು ಎಲ್ಲರಿಗೂ ಪ್ರೇರಣೆಯಾಗಿವೆ. ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಸಂಸ್ಥೆ ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಎಲ್ಲರೂ ಆರೋಗ್ಯದ ಮೇಲೆ ಕಾಳಜಿ ವಹಿಸಬೇಕು. ಮುಖ್ಯವಾಗಿ ಮಹಿಳೆಯರಲ್ಲಿ ಆರೋಗ್ಯದ ಕಾಳಜಿ ಅಗತ್ಯ, ಆರೋಗ್ಯವಂತ ಮಹಿಳೆಯಿಂದ ಇಡೀ ಕುಟುಂಬ ಕ್ಷೇಮವಾಗಿರುತ್ತದೆ. ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಕೂಡ್ಲಿಗಿ ವಲಯದ ಮೇಲ್ವಿಚಾರಕಿ ಜ್ಯೋತಿಗುಡಿ, ತಾಲೂಕು ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ರೇಖಾ ನೀರಲಕೇರಿ, ಆರೋಗ್ಯ ಇಲಾಖೆ ಸಿಬ್ಬಂದಿ ರಮ್ಯಾ, ವೀರೇಶ್, ಒಕ್ಕೂಟದ ಅಧ್ಯಕ್ಷೆ ಬಸಂತಿ, ಸೇವಾ ಪ್ರತಿನಿಧಿಗಳಾದ ಡಿ.ಎಚ್.ಪೂರ್ಣಿಮಾ, ರೇಣುಕಾ, ನೇತ್ರಾವತಿ ಇತರರಿದ್ದರು.