

ಮೂಡಿಗೆರೆ: ಮಹಿಳೆಯರು ಕಾನೂನಿನ ಅರಿವು ಹೊಂದುವುದರಿಂದ ಅವರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸಾಧ್ಯ ಎಂದು ಮೂಡಿಗೆರೆ ನ್ಯಾಯಾಲಯದ ನ್ಯಾಯಾಧೀಶೆ ಸುರಕ್ಷಾ ಹೇಳಿದರು.
ಪಟ್ಟಣದ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಸಮಾಜ ಸೇವಾ ಸಂಘ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಮಕ್ಕಳು ಮತ್ತು ಮಹಿಳೆಯರಿಗಾಗಿ ವಿಶೇಷ ಕಾನೂನುಗಳಿವೆ. ದೌರ್ಜನ್ಯಗಳಾದರೆ ನ್ಯಾಯ ಪಡೆಯಲು ಕಾನೂನಿನ ಜ್ಞಾನ ನೆರವಾಗುತ್ತದೆ. ಪ್ರತಿ ನ್ಯಾಯಾಲಯದಲ್ಲಿಯೂ ಕಾನೂನು ಸೇವಾ ಸಮಿತಿ ಅಸ್ತಿತ್ವದಲ್ಲಿದ್ದು, ಅದರ ಮೂಲಕ ಕಾನೂನು ಸೇವೆ ಪಡೆಯಬಹುದು ಎಂದರು.
ವೈದ್ಯೆ ಡಾ.ಹರ್ಷಿತಾ ಮಾತನಾಡಿ, ಜನರಿಗೆ ಆರೋಗ್ಯವೇ ದೊಡ್ಡ ಮಟ್ಟದ ಸಂಪತ್ತಾಗಿದೆ. ಉತ್ತಮ ಆರೋಗ್ಯ ಹೊಂದಲು ಪ್ರತಿದಿನ ವ್ಯಾಯಾಮ ಸೇರಿದಂತೆ ಉತ್ತಮ ಆಹಾರ ಪದ್ಧತಿ ಪಾಲಿಸಬೇಕು. ಬದಲಾದ ಆಹಾರ ಪದ್ಧತಿಯಿಂದ ಸಣ್ಣ ವಯಸ್ಸಿನಲ್ಲಿ ದೀರ್ಘ ಕಾಲಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರ ಬಳಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗ ಮುಕ್ತ ಜೀವನ ನಡೆಸಬಹುದು ಎಂದರು.
ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಮನೋಜ್ ಪೂಜಾರಿ, ಸಲಹಾ ಸಮಿತಿ ಅಧ್ಯಕ್ಷೆ ನಾಗರತ್ನಮ್ಮ, ಮಾಜಿ ಜಿಪಂ ಸದಸ್ಯೆ ಸುಧಾ ಯೋಗಿಶ್, ಬ್ರಹ್ಮ ಶ್ರೀನಾರಾಯಣ ಗುರು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗಿಶ್ ಪೂಜಾರಿ, ಉಪಾಧ್ಯಕ್ಷ ಸಾಗರ್‌ಬಿಳಗುಳ, ವಕೀಲ ಆಶಿಕ್, ಸುರೇಶ್, ಸುಪ್ರೀತಾ, ಗೀತಾ, ಸುಪ್ರಿಯಾ, ಗೀತಾ ಬಿಳಗುಳ, ಜಯಶ್ರೀ ಇತರರಿದ್ದರು.