

ರಾಮನಗರ: ಸಂವಿಧಾನ ಮತ್ತು ಕಾನೂನಿನ ಪ್ರಕಾರ ಸಮಾಜದಲ್ಲಿ ಸರ್ವರೂ ಸಮಾನರು. ಮಹಿಳೆಯರ ಮೇಲೆ ನಡೆಯುವ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆ ಕೂಡ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನಿಂಗಪ್ಪ ಪರಶುರಾಮ ಕೋಪರ್ಡೆ ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ವಕೀಲ ಸಂಘ, ಪೊಲೀಸ್ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಜಿಲ್ಲಾ ಮತ್ತು ಮಕ್ಕಳ ರಕ್ಷಣಾ ಘಟಕ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ದಮನಿತ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಹಲವಾರು ಕಾನೂನುಗಳಿದ್ದು ಇವುಗಳ ಸದುಪಯೋಗ ಪಡೆದುಕೊಳ್ಳುವ ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆಗಬೇಕಿದೆ ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅನಿತಾ ಮಾತನಾಡಿ, ದಮನಿತ ಮಹಿಳೆಯರಿಗೆ ಕಾನೂನು ಅರಿವು ಅಗತ್ಯ. ಮಹಿಳೆಯರು ಮೊದಲು ಸಂಘಟಿತರಾಗಬೇಕು. ಸರ್ಕಾರದ ವಿವಿಧ ಇಲಾಖೆಗಳಡಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕಿದೆ. ನೊಂದ ಮಹಿಳೆಯರನ್ನು ಸಾಂತ್ವನಗೊಳಿಸುವಂತ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಸವಲತ್ತು ನೀಡಿದ್ದು, ಮಹಿಳೆಯರು ಯಾವುದೇ ಕಾನೂನು ನೆರವು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೂ ಹಕ್ಕು ಇದೆ. ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಮರ್ಪಕವಾಗಿ ಕಾನೂನಿನ ಅರಿವು ಹೊಂದಬೇಕು. ಆಗಮಾತ್ರ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.
ಜಿಪಂ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್ ಮಾತನಾಡಿ, ಮಹಿಳೆ ಹುಟ್ಟಿನಿಂದ ಸಾವಿನವರೆಗೂ ಒಂದಲ್ಲಾ ಒಂದು ಸಮಸ್ಯೆಯಲ್ಲಿ ಸಿಲುಕುತ್ತಾಳೆ. ಈ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಕಾನೂನು ಇದೆ.ಇದರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
ಮಹಿಳಾ ಅಭಿವೃದ್ಧಿ ನಿರೀಕ್ಷಕಿ ಬಿ . ಗಾಯಿತ್ರಿ ದೇವಿ, ಜಿಲ್ಲಾ ಕ್ಷಯರೋಗ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಕೆ. ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾರಾಯಣ ಸ್ವಾಮಿ, ವಕೀಲ ಸಂಘದ ಅಧ್ಯಕ್ಷ ಹನುಮಂತರಾಜು, ಸರೋಜಿನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳೆಯರು ಹಾಗೂ ಇತರರು ಭಾಗವಹಿಸಿದ್ದರು.
ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರು ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದರು