ಮಹಿಳೆಯರ ಹೆಸರಿನಲ್ಲಿ ಸಾಲ ಪಡೆದು 3.38 ಕೋಟಿ ರೂ. ವಂಚಿಸಿದ ನೌಕರರು

Crime Logo
Published on

ಹಿರೇಕೆರೂರ: ಮೈಕ್ರೋಫೈನಾನ್ಸ್‌ನ ವ್ಯವಸ್ಥಾಪಕ ಹಾಗೂ 2ನೇ ಉಸ್ತುವಾರಿ ಸೇರಿಕೊಂಡು ಮಹಿಳೆಯರ ಹೆಸರಿನಲ್ಲಿ ಸಾಲ ಪಡೆದುಕೊಂಡು ಫೈನಾನ್ಸ್‌ಗೆ 3.38 ಕೋಟಿ ರೂ. ಮೋಸ ಮಾಡಿದ ಪ್ರಕರಣದ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಪಟ್ಟಣದ ಬಿಎಸ್‌ಎಸ್ ಮೈಕ್ರೋಫೈನಾನ್ಸ್ ಲಿಮಿಟೆಡ್‌ನ ಕ್ಷೇತ್ರ ಕಚೇರಿ ವ್ಯವಸ್ಥಾಪಕ ಹಾಗೂ ದಾವಣಗೆರೆ ತಾಲೂಕಿನ ತುಂಬಿಗೆರೆ ಗ್ರಾಮದ ಬಸವರಾಜಯ್ಯ ಚನ್ನಯ್ಯ ಹಾಗೂ ಹರಿಹರದ ಹೊಳೆಸಿರಿಗೆರೆಯ ನಿವಾಸಿ ಮತ್ತು ಫೈನಾನ್ಸ್‌ನ ಸೆಕೆಂಡ್ ಇನ್‌ಚಾರ್ಜ ಶಿವಾನಂದಪ್ಪ ಪರಮೇಶಪ್ಪ ದ್ಯಾವನಕಟ್ಟೆ ಮೋಸ ಮಾಡಿದ ಆರೋಪಿಗಳು.
ಇವರ ವಿರುದ್ಧ ಫೈನಾನ್ಸ್‌ನ ಸಹಾಯಕ ವಲಯ ಕ್ಷೇತ್ರ ಕಾರ್ಯಾಚರಣೆ ವ್ಯವಸ್ಥಾಪಕ ತಿಮ್ಮರಾಜು ರುದ್ರಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ವಿವರ…
ಆರೋಪಿಗಳು ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ 376 ಮಹಿಳಾ ಖಾತೆದಾರರಿಂದ ಸಾಲ ಕೊಡುವ ಅರ್ಜಿ ಪಡೆದುಕೊಂಡು ತಲಾ ಒಬ್ಬರಿಗೆ 1.25 ಲಕ್ಷ ರೂ.ನಂತೆ ಒಟ್ಟು 4.16 ಕೋಟಿ ರೂ. ಸಾಲ ಮಂಜೂರು ಮಾಡಿಕೊಂಡು ಆ ಹಣವನ್ನು ತಾವೇ ಬಳಸಿಕೊಂಡಿದ್ದಾರೆ. ಅಲ್ಲದೆ ಅದರಲ್ಲಿ 87 ಲಕ್ಷ ರೂ. ಸಾಲವನ್ನು ತಾವೇ ಮರು ಪಾವತಿ ಮಾಡಿದ್ದಾರೆ.
ನಂತರ ಫೈನಾನ್ಸ್‌ನ ಹೆಸರಿನಲ್ಲಿ ನಕಲಿ ಕ್ಯಾಶಬುಕ್ ತಯಾರಿಸಿಕೊಂಡು ಅದರಲ್ಲಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಹೀಗೆ ಒಟ್ಟು 3.38 ಕೋಟಿ ರೂ. ಹಣ ಬಳಸಿಕೊಂಡು ಫೈನಾನ್ಸ್‌ಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net