11 ಮಹಿಳೆಯರಿಂದ 18 ಮೈಕ್ರೋ ಫೈನಾನ್ಸ್​ಗಳ ವಿರುದ್ಧ ದೂರು ದಾಖಲು

Crime Logo
Published on

ರಾಣೆಬೆನ್ನೂರ: ಸಾಲ ವಸೂಲಿ ನೆಪದಲ್ಲಿ ಮಹಿಳೆಯರಿಗೆ ಮನೆಯಿಂದ ಹೊರಗೆ ಬಿಡದೆ ಕಿರುಕುಳ ನೀಡಿದ ಆರೋಪದಡಿ ಒಂದೇ ಗ್ರಾಮದ 11 ಮಹಿಳೆಯರಿಂದ ಬರೋಬ್ಬರಿ 18 ಮೈಕ್ರೋ ಫೈನಾನ್ಸ್​ನವರ ವಿರುದ್ಧ ತಾಲೂಕಿನ ಹಲಗೇರಿ ಪೊಲೀಸ್​ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ.

ನಗರದ ಆಶೀರ್ವಾದ ಫೈನಾನ್ಸ್​, ಇಕ್ವಿಟಾಸ್​ ಫೈನಾನ್ಸ್​, ಪ್ರಗತಿ ಫೈನಾನ್ಸ್​, ಆಕ್ಸಿಸ್​ ಬ್ಯಾಂಕ್​, ಪಿರಾಮಲ್​ ಫೈನಾನ್ಸ್​, ಸಮಸ್ತ ಫೈನಾನ್ಸ್​, ಅನ್ನರ್ಪೂಣ ಫೈನಾನ್ಸ್​, ಜಿಂದಾಲ್​ ಫೈನಾನ್ಸ್​, ಪಿನ್​ಕೇರ್​ ಫೈನಾನ್ಸ್​, ಬೆಲ್​ಸ್ಟಾರ್​ ಫೈನಾನ್ಸ್​, ಬ್ಯಾಡಗಿಯ ಮುರಡೂರ ಫೈನಾನ್ಸ್​, ಮಣಪ್ಪುರಂ ಫೈನಾನ್ಸ್​, ಸೂಯೋರ್ದಯ ಫೈನಾನ್ಸ್​, ಹಿರೇಕೆರೂರಿನ ಬಿಎಸ್​ಎಸ್​ ಫೈನಾನ್ಸ್​, ಮಧುರಾ ಫೈನಾನ್ಸ್​, ಜನಸ್ಮಾಲ ಫೈನಾನ್ಸ್​, ರಟ್ಟಿಹಳ್ಳಿಯ ಸುಕೋ ಬ್ಯಾಂಕ್​, ಬ್ಯಾಡಗಿಯ ಭರತ ಫೈನಾನ್ಸ್​ ಸೇರಿ 18 ಮೈಕ್ರೋ ಫೈನಾನ್ಸ್​ನವರ ವಿರುದ್ಧ ದೂರು ದಾಖಲಾಗಿದೆ.

ಇವರ ವಿರುದ್ಧ ತಾಲೂಕಿನ ಗುಡ್ಡದಬೇವಿನಹಳ್ಳಿಯ ನಿವಾಸಿ ನಾಗವ್ವ ಮರಡೆಪ್ಪ ತಳವಾರ (38) ಎಂಬುವರ ಸೇರಿ 11 ಜನ ಮಹಿಳೆಯರು ದೂರು ನೀಡಿದ್ದಾರೆ. ಇವರು ವಿವಿಧ ಮೈಕ್ರೋ ಫೈನಾನ್ಸ್​ ಹಾಗೂ ಬ್ಯಾಂಕ್​ನಲ್ಲಿ ಒಟ್ಟು 28.50 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು.

ಪ್ರತಿ ತಿಂಗಳು ಸಾಲದ ಕಂತುಗಳನ್ನು ತುಂಬುತ್ತ ಬಂದಿದ್ದೇವೆ. ಆದರೀಗ ಬ್ಯಾಂಕ್​ನವರು 16.65 ಲಕ್ಷ ರೂ. ಸಾಲ ಕಂತುಗಳು ಬಾಕಿಯಿದ್ದು ಅದನ್ನು ತುಂಬುವಂತೆ ಐದಾರು ತಿಂಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ, ಈ ಬಾರಿ ಅತಿವೃಷ್ಟಿಯಾಗಿ ಬೆಳೆ ಬಾರದ ಕಾರಣ ನಮಗೆ ಸಾಲದ ಕಂತುಗಳನ್ನು ತುಂಬಲು ಆಗುತ್ತಿಲ್ಲ.

ಹೀಗಾಗಿ ಸ್ವಲ್ಪ ಸಮಯ ಕೊಡಿ ಎಂದು ಕೇಳಿದರೂ ಫೈನಾನ್ಸ್​ನವರು ಕೇಳುತ್ತಿಲ್ಲ. ಸಾಲದ ಹಣ ನೀಡದಿದ್ದರೆ ಮನೆಯಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net