

ಕೊಪ್ಪ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಎರಡನೇ ಅಧಿಕಾರ ಅವಧಿಗೆ ಸರ್ಕಾರ ಮೀಸಲಾತಿ ಘೋಷಿಸಿದೆ. ಮೀಸಲಾತಿ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆ ತುಸು ಬಿರುಸುಗೊಂಡಿದೆ. ಚುನಾವಣೆ, ಮೈತ್ರಿ ಮೂಲಕ ಅಧಿಕಾರ ಹಂಚಿಕೆಯ ಚರ್ಚೆಗಳು ಆರಂಭವಾಗಿವೆ. ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪುರಸಭೆ, ಪಟ್ಟಣ ಪಂಚಾಯಿತಿಗಳ ಮೀಸಲಾತಿಗಳ ವಿಶ್ಲೇಷಣೆ ಇಲ್ಲಿದೆ.
ಹದಿನೈದು ತಿಂಗಳಿನಿಂದ ಖಾಲಿ ಇದ್ದ ಕೊಪ್ಪ ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಚುನಾವಣೆ ಕಾವು ನಿಧಾನವಾಗಿ ಹೆಚ್ಚಾಗುತ್ತಿದೆ. ಅಧ್ಯಕ್ಷ ಮೀಸಲಾತಿ ಮಹಿಳೆಗೆ ನಿಗದಿ ಆಗಿರುವುದರಿಂದ ಸ್ಪರ್ಧಾಕಾಂಕ್ಷಿಗಳೂ ಹೆಚ್ಚಾಗಿದ್ದಾರೆ.
ಪಟ್ಟಣ ಪಂಚಾಯಿತಿಯಲ್ಲಿ ಸದಸ್ಯರದ್ದೇ ಮೇಲುಗೈ. ಈ ಹಿಂದಿನ ಅವಧಿಯಲ್ಲಿಯೂ ಬಿಜೆಪಿ ಸದಸ್ಯರು ಅಧಿಕಾರದ ಗದ್ದುಗೆ ಹಿಡಿದಿದ್ದರು. ಪ್ರಸ್ತುತ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಒಲಿದಿದೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ. ಬಿಜೆಪಿ ಸದಸ್ಯರು ಪಪಂನಲ್ಲಿ ಹೆಚ್ಚಿರುವ ಕಾರಣ ಈ ಬಾರಿಯೂ ಬಿಜೆಪಿಯೇ ಅಧಿಕಾರ ದಕ್ಕಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಹನ್ನೊಂದು ಸದಸ್ಯರ ಬಲ ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ ಸರಳ ಬಹುಮತ ಹೊಂದಿರುವ ಬಿಜೆಪಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಕ್ಕಾ ಎಂದು ಅಂದಾಜಿಸಲಾಗಿದೆ. ಬಿಜೆಪಿಯಲ್ಲಿ ಐದು ಸದಸ್ಯೆಯರು ಇರುವ ಕಾರಣ ಸದಸ್ಯರು ರೇಸ್‌ನಲ್ಲಿ ತಾ ಮುಂದು, ನಾ ಮುಂದು ಎನ್ನುತ್ತಿದ್ದಾರೆ. ಇದರಿಂದ ಬಿಜೆಪಿಗೆ ತಲೆಬೇನೆ ಆರಂಭವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರು ರೇಸ್‌ನಲ್ಲಿ ಇದ್ದಾರೆ. ಹೇಮಾವತಿ, ರೇಖಾ ಪ್ರಕಾಶ್, ಗಾಯತ್ರಿ ವಸಂತ್, ಗಾಯತ್ರಿ ಶೆಟ್ಟಿ, ಸುಜಾತಾ ವಸಂತ್ ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ನಾಲ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಬ್ಬರನ್ನು ಆಯ್ಕೆ ಮಾಡುವ ಸವಾಲು ಬಿಜೆಪಿ ಮುಖಂಡರಲ್ಲಿದೆ. ಸ್ವಲ್ಪ ಬಿಜೆಪಿ ಎಡವಿದರೂ ಆಪರೇಷನ್ ಹಸ್ತಕ್ಕೆ ಕಮಲಪಡೆ ಬಲಿಯಾಗಬಹುದು. ಮುಖಂಡರು ಪಕ್ಷದ ಸಭೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಆಯ್ಕೆ ಮಾಡಲಿದ್ದಾರೆ.
ಕಾಂಗ್ರೆಸ್ ಸಹ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ. ಆಪರೇಷನ್ ಹಸ್ತ ತಂತ್ರ ರೂಪಿಸಿ ಪಪಂ ಗದ್ದುಗೆ ಹಿಡಿಯಲು ಪ್ರಯತ್ನಿಸುವ ಸಾಧ್ಯತೆ ಇದೆ. ಬಿಜೆಪಿ ಒಳಗಿನ ಕಾರ್ಯತಂತ್ರ ಗಮನಿಸಿ ಕಾಂಗ್ರೆಸ್ ಪ್ರತಿತಂತ್ರ ರೂಪಿಸಬಹುದು. ಅಧ್ಯಕ ಸ್ಥಾನದ ಆಯ್ಕೆಯಲ್ಲಿ ಬಿಜೆಪಿ ಒಳಗೆ ಸಮನ್ವಯ ಸಾಧಿಸದೆ ಇದ್ದರೆ ಕಾಂಗ್ರೆಸ್ ಆಪರೇಷನ್‌ಗೆ ಇಳಿಯಬಹುದು. ಎಂಎಲ್ಸಿ ಎಂ.ಕೆ.ಪ್ರಾಣೇಶ್ ಅವರು ಚಿಕ್ಕಮಗಳೂರು ತಾಲೂಕನ್ನು ನೋಡೆಲ್ ತಾಲೂಕು ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್ ತಂತ್ರ ರೂಪಿಸಬಹುದು ಎಂಬ ಕಾರಣಕ್ಕೆ ಎಂ.ಕೆ.ಪ್ರಾಣೇಶ್ ತಾಲೂಕು ಬದಲಾಯಿಸುವ ಸಾಧ್ಯತೆ ಹೆಚ್ಚಿದೆ. ಕೊಪ್ಪವನ್ನು ನೋಡೆಲ್ ತಾಲೂಕು ಆಗಿ ಆಯ್ಕೆ ಮಾಡಿಕೊಂಡಲ್ಲಿ ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮತದಾನ ಹಕ್ಕು ಹೊಂದಿರುತ್ತಾರೆ. ಮೀಸಲಾತಿ ಘೋಷಣೆಯಾದ ನಂತರ ಬಿಜೆಪಿಗೆ ಆಪರೇಷನ್ ಹಸ್ತದ ವಾಸನೆ ಬಡಿದಂತಿದೆ. ಆ ಕಾರಣದಿಂದ ಬಿಜೆಪಿ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಚುನಾವಣೆಯಲ್ಲಿ ಪಕ್ಷ ನಿಷ್ಠೆ, ಹಣ ಬಲ ಮುಂತಾದ ವಿಚಾರಗಳೂ ಪ್ರಭಾವ ಬೀರುತ್ತವೆ.