

ಮಡಿಕೇರಿ:
ಮಕ್ಕಳಿಗೆ ಕನ್ನಡ ಭಾಷೆಯ ಮಹತ್ವ ತಿಳಿಸುವಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸಿದ್ದು, ಮನೆಯಲ್ಲಿ ಕನ್ನಡ ಭಾಷೆಯ ಶಿಕ್ಷಕಿಯರಂತೆ ಮಕ್ಕಳಿಗೆ ಕನ್ನಡದ ಹಿರಿಮೆ ತಿಳಿಸುವ ಕೆಲಸವನ್ನು ಮಹಿಳೆಯರು ಮಾಡಬೇಕಾಗಿದೆ ಎಂದು ಹಿರಿಯ ಸಾಹಿತಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಹೇಳಿದರು. ಇಲ್ಲಿನ ಓಂಕಾರ ಸದನದಲ್ಲಿ ಭಾನುವಾರ ಸಮರ್ಥ ಕನ್ನಡಿಗ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನಮ್ಮ ವೇದಿಕೆ - ನಿಮ್ಮ ಪ್ರತಿಭೆ ಕನ್ನಡ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಮನೆಯಲ್ಲಿಯಾದರೂ ತಾಯಂದಿರು ಕನ್ನಡದಲ್ಲಿ ಮಾತನಾಡುತ್ತಿರಬೇಕು. ಈ ಮೂಲಕ ಮಾತ್ರ ಭಾಷೆಯನ್ನು ಮಕ್ಕಳಿಗೆ ಕಲಿಸುವಂತಾಗಬೇಕು. ಮಹಿಳೆಯರು ಮನೆಯಲ್ಲಿ ಪ್ರಧಾನ ಪಾತ್ರ ವಹಿಸುವುದರಿಂದಾಗಿ ಸುಲಭವಾಗಿ ಮಕ್ಕಳಲ್ಲಿ ಕನ್ನಡದ ಮಹತ್ವ ಹಾಸುಹೊಕ್ಕಾಗಲು ಸಾಧ್ಯವಾಗುತ್ತದೆ. ಕಾರ್ಯಕ್ರಮಗಳಲ್ಲಿ ಪಾಶ್ಚಾತ್ಯ ಗೀತೆಗಳನ್ನು ಹಾಡಿಸುವ ಬದಲಿಗೆ ಕನ್ನಡ ಗೀತಗಾಯನಕ್ಕೆ ಪ್ರಾಶಸ್ತ್ಯ ನೀಡಬೇಕು. ಕನ್ನಡ ಭಾಷೆ, ಸಂಸ್ಕೃತಿ ಸಂಬಂಧಿತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳಲ್ಲಿನ ಭಾಷಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಶಾದಾಯಕ ನುಡಿಗಳನ್ನು ಆಡಿ ಮಕ್ಕಳ ಪ್ರತಿಭೆಯನ್ನು ಪ್ರಶಂಸಿಸುವುದು ಸೂಕ್ತ. ಕನ್ನಡ ಪರ ಕಾರ್ಯಕ್ರಮಗಳು ಎಲ್ಲಾ ವರ್ಗದವರು ಪಾಲ್ಗೊಳ್ಳುವಂಥ ಮೌಲ್ಯಯುತ ಕಾರ್ಯಕ್ರಮಗಳಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ಈ ಒಂದು ವರ್ಷ ಕೊಡಗಿನಲ್ಲಿಯೂ ಉತ್ತಮ ಕಾರ್ಯಕ್ರಮಗಳು ಮೂಡಿಬರುವಂತಾಗಲಿ ಎಂದು ಹಾರೈಸಿದರು.
ಹಾಸನದ ಉಪನ್ಯಾಸಕಿ ಉಮಾನಾಗರಾಜ್ ಮಾತನಾಡಿ, ಯುವಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ಸಮರ್ಥ ಕನ್ನಡಿಗರು ಸಂಸ್ಥೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಸಾಹಿತ್ಯ ಪರಂಪರೆಗೆ ಪೂರಕವಾಗಿದೆ ಎಂದರು.
ಸಮರ್ಥ ಕನ್ನಡಿಗ ಸಂಸ್ಥೆಯ ಜಿಲ್ಲಾ ಪ್ರಧಾನ ಸಂಚಾಲಕಿ ಕೆ. ಜಯಲಕ್ಷ್ಮೀ ಮಾತನಾಡಿ, ಕಳೆದ ೫ ವರ್ಷಗಳಿಂದ ರಾಜ್ಯಮಟ್ಟದ ಸಮರ್ಥ ಕನ್ನಡಿಗ ಸಂಸ್ಥೆಯು ಕೊಡಗಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಸಂಬಂಧಿತ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದೆ. ಸರ್ಕಾರದಿಂದ ಯಾವುದೇ ಅನುದಾನ ಇಲ್ಲದೇ ಸ್ಪರ್ಧಿಗಳಿಂದಲೂ ಪ್ರವೇಶ ಶುಲ್ಕ ಪಡೆಯದೇ ಸಮರ್ಥ ಕನ್ನಡಿಗ ಸಂಸ್ಥೆಯಲ್ಲಿರುವ ಸದಸ್ಯೆಯರು ಸ್ವಂತ ಹಣದಿಂದ ಮತ್ತು ದಾನಿಗಳ ನೆರವಿನಿಂದ ವೈವಿಧ್ಯಮಯ ಕಾರ್ಯಕ್ರಮ ರೂಪಿಸುತ್ತಾ ಬಂದಿದ್ದಾರೆ ಎಂದರು.
ವೇದಿಕೆಯಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಸಾಹಿತಿ ಅಂಬೆಕಲ್ ಸುಶೀಲ ಕುಶಾಲಪ್ಪ, ವಿರಾಜಪೇಟೆಯ ಲೇಖಕಿ ಪುಪ್ಪಲತ ಶಿವಪ್ಪ, ಸಮರ್ಥ ಕನ್ನಡಿಗರು ಸಂಸ್ಥೆಯ ರಾಜ್ಯ ಸಂಚಾಲಕ ಆನಂದ್ ದೆಗ್ಗನಹಳ್ಳಿ, ಹೇಮಂತ್ ಸಮರ್ಥ ಕನ್ನಡಿಗರು ಸಂಸ್ಥೆಯ ಚಿತ್ರಾ ಆರ್ಯನ್, ಪ್ರೀತಾ ಕೃಷ್ಣ, ಗಿರಿಜಾಮಣಿ,ಪ್ರತಿಮಾ ಹರೀಶ್ ರೈ ಇದ್ದರು.
ಕೊಡಗಿನ ವಿವಿಧ ಶಾಲಾ ವಿದ್ಯಾರ್ಥಿಗಳು, ವಿದ್ಯಾರ್ಥಿ ತಂಡಗಳಿಂದ ಛದ್ಮವೇಶ, ನೃತ್ಯ, ಮಹಿಳಾ ತಂಡಗಳಿಂದ ಸಮೂಹ ಗಾಯನ, ಸಮೂಹ ನೃತ್ಯ ಸ್ಪರ್ಧೆಗಳು ನಡೆದವು. ಸಮರ್ಥ ಕನ್ನಡಿಗರು ಸಂಸ್ಥೆಯ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ, ಕಲಾಪ್ರೇಮಿಗಳಿಗೆ ಕಲ್ಲುಸಕ್ಕರೆಯನ್ನು ವಿತರಿಸಿ ಕರ್ನಾಟಕ ಎಂದು ರಾಜ್ಯಕ್ಕೆ ನಾಮಕರಣವಾದ ಸಂಭ್ರಮವನ್ನು ಆಚರಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರಿಗೂ ಹಾರ, ಹೂವು ನೀಡುವ ಬದಲಿಗೆ ಕಲ್ಲುಸಕ್ಕರೆಯನ್ನೇ ನೀಡುವ ಮೂಲಕ ಕನ್ನಡ ಹಬ್ಬದ ಸಿಹಿಯನ್ನು ಉಣಬಡಿಸಿದ್ದು ವಿಶೇಷವಾಗಿತ್ತು.