ಆತ್ಮವಿಶ್ವಾಸದಿಂದ ಮುನ್ನುಗ್ಗುವ ಶಕ್ತಿ ಮಹಿಳೆಯರಲ್ಲಿದೆ: ಒಕ್ಕಲಿಗ ಲೇಡೀಸ್ ಅಸೋಸಿಯೇಷನ್ ಅಧ್ಯಕ್ಷೆ ಪದ್ಮಜಾ ಶ್ರೀನಿವಾಸ್ ಅಭಿಮತ

24
Published on

ಮೈಸೂರು: ದೇಶದ ಪ್ರತಿಯೊಬ್ಬ ಮಹಿಳೆಯರು ಆರ್ಥಿಕ, ಸಾಮಾಜಿಕ, ಕೌಟುಂಬಿಕ ಹಾಗೂ ಔದ್ಯೋಗಿಕವಾಗಿ ಜಾಗೃತರಾಗುತ್ತಿದ್ದಾರೆ. ಅಲ್ಲದೆ ಎಲ್ಲ ಕ್ಷೇತ್ರದಲ್ಲೂ ಧೈರ್ಯ, ಆತ್ಮವಿಶ್ವಾಸದಿಂದ ಮುನ್ನುಗ್ಗುವ ಶಕ್ತಿ ಮಹಿಳೆಯರಲ್ಲಿದೆ ಎಂದು ಒಕ್ಕಲಿಗ ಲೇಡೀಸ್ ಅಸೋಸಿಯೇಷನ್ ಅಧ್ಯಕ್ಷೆ ಪದ್ಮಜಾ ಶ್ರೀನಿವಾಸ್ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಜಯ ನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಒಕ್ಕಲಿಗ ಲೇಡೀಸ್ ಅಸೋಸಿಯೇಷನ್ ಮಹಿಳೆಯರಿಗೆ ಶುಕ್ರವಾರ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ, ಎಲ್ಲ ಕ್ಷೇತ್ರದಲ್ಲೂ ಮುಂದೆ ಬರುತ್ತಿದ್ದಾರೆ. ಕುಟುಂಬದ ನಿರ್ವಹಣೆ ಹಾಗೂ ಸರ್ಕಾರಿ ಕಚೇರಿ ಕೆಲಸದ ಜತೆಗೆ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ನಿರ್ವಹಿಸುವ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ಅಲ್ಲದೆ, ಹೊಸ ಚೈತನ್ಯ ಹಾಗೂ ಆರೋಗ್ಯ ಆಯಸ್ಸು ವೃದ್ಧಿಸುತ್ತದೆ. ಮುಂದಿನ ದಿನಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸುವ ಮೂಲಕ ಆಡಳಿತದ ಉನ್ನತ ಹುದ್ದೆಗಳು ದೊರಕುವಂತೆ ಮಾಡಬೇಕು ಎಂದು ತಿಳಿಸಿದರು.
ಅಸೋಸಿಯೇಷನ್ ಉಪಾಧ್ಯಕ್ಷೆ ನಳಿನಾ ಮಂಜು, ಕಾರ್ಯದರ್ಶಿಗಳಾದ ಶೋಭಾ ಮಂಜುನಾಥ್, ಭವ್ಯಾ ರಘು, ಖಜಾಂಚಿ ಸುಮಾ ಅನಿಲ್, ನಿರ್ದೇಶಕರಾದ ವಿಜಯಾ ಮಂಜುನಾಥ್, ನವೀನಾ ರಂಗರಾಜು, ನಮತಾ ಮಂಜುನಾಥ್, ವನಿತಾ ರವಿ, ಆಟಗಳ ಉಸ್ತುವಾರಿ ಜಯಪ್ಪ ಹೊನ್ನಾಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net