ಸಮಾಜವನ್ನು ಮುನ್ನಡೆಸುವ ಸಾಮರ್ಥ್ಯ ಮಹಿಳೆಗಿದೆ

ಸಮಾಜವನ್ನು ಮುನ್ನಡೆಸುವ ಸಾಮರ್ಥ್ಯ ಮಹಿಳೆಗಿದೆ
Published on

ಹುಣಸೂರು: ಮನೆಯನ್ನು ಸಮರ್ಥವಾಗಿ ಮುನ್ನಡೆಸುವ ಮಹಿಳೆ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಸಾಮರ್ಥ್ಯ ಹೊಂದಿದ್ದಾಳೆ ಎಂದು ರೋಟರಿ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕಿ ಉಮಾಶಣೈ ಅಭಿಪ್ರಾಯಪಟ್ಟರು.

ನಗರದ ರೋಟರಿ ಭವನದಲ್ಲಿ ರೋಟರಿ ಇನ್ನರ್‌ವ್ಹೀಲ್ ಹುಣಸೂರು ವತಿಯಿಂದ ಮಂಗಳವಾರ ಆಯೋಜಿಸಿದ್ದ 2025-26ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ರೋಟರಿ ಸಂಸ್ಥೆಯ ಅಂಗಸಂಸ್ಥೆಯಾಗಿ ಇನ್ನರ್‌ವ್ಹೀಲ್ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ದೇಶ ಕಟ್ಟುವ ಮುಖ್ಯವಾಹಿನಿಯಲ್ಲಿ ಮಹಿಳೆಯರ ಪಾತ್ರ ಬಹುದೊಡ್ಡದಿದೆ. ಮಹಿಳೆ ಎಂದರೆ ಅಡುಗೆ ಮನೆಗೆ ಸೀಮಿತ ಎನ್ನುವ ಕಾಲ ಈಗಿಲ್ಲ. ಮಹಿಳೆಯರು ಪ್ರವೇಶಿಸದ ಕ್ಷೇತ್ರವಿಲ್ಲ. ಸಮಾಜದ ಹಳೆಯ ಕಟ್ಟುಪಾಡುಗಳನ್ನು ಬಿಟ್ಟು ಮನೆಯ ಶ್ರೇಯೋಭಿವೃದ್ಧಿಗೆ ದುಡಿದಂತೆ ಸಮಾಜದ ಶ್ರೇಯೋಭಿವೃದ್ಧಿಗಾಗಿಯೂ ದುಡಿದು ಸಾಧಿಸಬಲ್ಲಳು ಎನ್ನುವುದನ್ನು ನೋಡುತ್ತಿದ್ದೇವೆ. ಇನ್ನರ್‌ವ್ಹೀಲ್ ಕ್ಲಬ್ ನಿಸ್ವಾರ್ಥ ಸೇವೆಯನ್ನೇ ಪರಮೋದ್ದೇಶವನ್ನಾಗಿಸಿಕೊಂಡು ನಡೆದುಬಂದಿದೆ. ಹುಣಸೂರು ಇನ್ನರ್‌ವ್ಹೀಲ್ ಕ್ಲಬ್ ತನ್ನದೇ ಆದ ರೀತಿಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಅಧ್ಯಕ್ಷೆ ಜ್ಯೋತಿ ವಿಶ್ವನಾಥ್‌ರ ನೇತೃತ್ವದಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯಗಳು ಆಗಲಿ ಎಂದು ಆಶಿಸಿದರು.

ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಜ್ಯೋತಿ ವಿಶ್ವನಾಥ್, ಸಾಮಾಜಿಕ ಸೇವೆ ಎನ್ನುವುದು ಫ್ಯಾಷನ್ ಆಗದೆ ವೃತ್ತಿಪರತೆಯನ್ನು ರೂಢಿಸಿಕೊಂಡು ಮುನ್ನಡೆಯುವ ಅವಶ್ಯಕತೆಯಿದೆ. ಸಮಾಜದಲ್ಲಿ ಏನೂ ಇಲ್ಲದ ಕುಟುಂಬಗಳು ಇಂದಿಗೂ ಇವೆ. ಶಿಕ್ಷಣ ಪಡೆಯಲಾಗದ ಮಕ್ಕಳೂ ಇದ್ದಾರೆ. ಇಲ್ಲದವರ ಬಾಳಿಗೆ ಕೈಲಾದ ಸಹಾಯಹಸ್ತ ಚಾಚುವುದೇ ನನ್ನ ಗುರಿಯಾಗಿದ್ದು, ಎಲ್ಲ ಸದಸ್ಯರ ಸಹಕಾರ ಮತ್ತು ಅಭಿಪ್ರಾಯಗಳನ್ನು ಗೌರವಿಸಿ ಮುನ್ನಡೆಯಲಿದ್ದೇನೆ ಎಂದರು.

ನಿಕಟಪೂರ್ವ ಅಧ್ಯಕ್ಷೆ ಸ್ಮಿತಾ ದಯಾನಂದ್ ತಮ್ಮ ಅವಧಿಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕ್ಲಬ್‌ನ ಉಪಾಧ್ಯಕ್ಷೆಯಾಗಿ ಜಯಲಕ್ಷ್ಮೀ, ಕಾರ್ಯದರ್ಶಿಯಾಗಿ ಕನಿಮೋಳಿ ತಂಗಮರಿಯಪ್ಪನ್, ಖಜಾಂಚಿಯಾಗಿ ಡಾ.ರಾಜೇಶ್ವರಿ ಬುಲೆಟಿನ್ ಎಡಿಟರ್ ಆಗಿ ಸುಜಾತ ವರದರಾಜ್ ಮತ್ತು ಐಎಸ್‌ಒ ಆಗಿ ಶಿವಕುಮಾರಿ ಪದಗ್ರಹಣ ಸ್ವೀಕರಿಸಿದರು. ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ಸರೋಜಿನಿ ವಿಕ್ರಂ, ವಿಜಯ ಕರೀಗೌಡ ಮತ್ತು ಜ್ಯೋತೇಶ್ವರಿ ಚಿಕ್ಕಮಲ್ಲೇಗೌಡರನ್ನು ಸನ್ಮಾನಿಸಲಾಯಿತು. ರೋಟರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕಗಳನ್ನು ವಿತರಿಸಲಾಯಿತು. ಪ್ಲಾಸ್ಟಿಕ್‌ಮುಕ್ತ ಪರಿಸರದ ಕಾರ್ಯಕ್ಕಾಗಿ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಲಾಯಿತು. ಕ್ಲಬ್‌ನ ಸದಸ್ಯರು, ಬೆಂಗಳೂರು, ಕುಶಾಲನಗರ ಮತ್ತು ಮೈಸೂರು ಇನ್ನರ್‌ವ್ಹೀಲ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net