ಮಹಿಳೆಯರಲ್ಲಿದೆ ನಿಷ್ಕಲ್ಮಶ ತ್ಯಾಗ, ಸಮರ್ಪಣಾ ಭಾವ: ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ ಬಣ್ಣನೆ

11
Published on

ಮೈಸೂರು: ಬೇರೆಯವರ ಖುಷಿಯಲ್ಲಿ ತಾನೂ ಸಂತೋಷ ಕಾಣುವ ಮಹಿಳೆ, ಸಾಧಕ, ಲೋಕದ ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದಾಳೆ ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವಿಭಾಗೀಯ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ ಬಣ್ಣಿಸಿದರು.

ಯಾದವಗಿರಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಹಿಳೆಯರಲ್ಲಿ ನಿಷ್ಕಲ್ಮಶವಾದ ತ್ಯಾಗ, ಸಮರ್ಪಣಾ ಮನೋಭಾವ ಇದೆ. ಕುಟುಂಬದಲ್ಲಿ ಪ್ರತಿದಿನ ಅವರ ಪಾತ್ರ ಬಹಳ ಮುಖ್ಯ ಎಂದರು.

ಈ ಸೃಷ್ಟಿಯಲ್ಲಿ ಸ್ತ್ರೀ, ಪುರುಷ ಎರಡು ಜಾತಿಗಳಿದ್ದು, ಇಬ್ಬರಲ್ಲಿಯೂ ವಿಶೇಷತೆಗಳಿವೆ. ಪ್ರಸ್ತುತ ದಿನಗಳಲ್ಲಿ ಪುರುಷರಿಗಿಂತಲೂ ಮಹಿಳೆಯರೇ ಎಲ್ಲ ವಿಚಾರದಲ್ಲೂ ಮುಂದುವರಿದ್ದಾರೆ. ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಬೇಕು. ಸನಾತನ ಕಾಲದಿಂದಲೂ ಹೆಣ್ಣನ್ನು ಗೌರವಿಸುತ್ತಾ ಬಂದಿದ್ದೇವೆ. ಅವಳನ್ನು ಗೌರವಿಸುವುದರೊಂದಿಗೆ ಪ್ರೋತ್ಸಾಹಿಸಬೇಕು. ಸ್ತ್ರೀ ಇಲ್ಲದೆ ಮನೆ ನಡೆಯುವುದು ಕಷ್ಟ. ಹೆಣ್ಣಿಲ್ಲದ ಮನೆ ಮನೆ ಎನಿಸಿಕೊಳ್ಳುವುದಿಲ್ಲ ಎಂದರು.

ಮಹಿಳೆಯರಲ್ಲಿ ಆಂತರಿಕವಾಗಿ ಬಂದಂತಹ ದೈವದತ್ತ ಶಕ್ತಿ ಇದೆ. ಮೌಲ್ಯಯುತ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಪ್ರಮುಖವಾಗಿದ್ದು, ಸಮಾಜಕ್ಕೆ ಶಾಂತಿ ಮತ್ತು ಶಕ್ತಿ ಹಂಚಲು ಮಹಿಳೆಯಿಂದ ಮಾತ್ರ ಸಾಧ್ಯ ಎಂದು ಬಣ್ಣಿಸಿದರು.

ಪ್ರೇರಕ ಶಕ್ತಿಯಾಗಿ ಮಹಿಳೆಯರು ರೂಪುಗೊಂಡಿದ್ದು, ಸಮಾಜಕ್ಕೆ ಆಧಾರ ಸ್ತಂಭವಾಗಿದ್ದಾರೆ. ದಿವ್ಯ ಗುಣ ಅಡಕವಾಗಿರುವ ಮಹಿಳೆ, ತಮ್ಮ ಉತ್ತಮ ಬದುಕಿಗೆ ಸ್ವಾವಲಂಬನೆ, ಸ್ವಾಭಿಮಾನದ ಜೀವನ ಬೆಳೆಸಿಕೊಳ್ಳಬೇಕಿದ್ದು, ಇದಕ್ಕೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೆಎಸ್‌ಎಸ್ ಕಾನೂನು ಕಾಲೇಜು ಪ್ರಾಂಶುಪಾಲೆ ವಾಣಿಶ್ರೀ ಮಾತನಾಡಿ, ಮಹಿಳೆಯರಲ್ಲಿ ತನಗೆ ದುಃಖವಾದರೂ ಬೇರೆಯವರೂ ದುಃಖ ಪಡಬಾರದು ಎನ್ನುವ ಗುಣವಿದೆ. ಸಹಾನುಭೂತಿ ಹಂಚುವ ಮನೋಭಾವ ಹೆಚ್ಚಿದೆ ಎಂದರು.

ಇಂದು ಮಹಿಳೆಯರಿಗಿಂತ ಪುರುಷರೇ ಹೆಚ್ಚು ಗೌರವ ನೀಡುತ್ತಿದ್ದಾರೆ. ಆದರೆ ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ ಹೆಣ್ಣಿನಿಂದಲೇ ಹೆಣ್ಣಿನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇದು ಸರಿಯಲ್ಲ. ಪರಸ್ಪರ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಚೀನ ಕಾಲದಿಂದ ಇಂದಿನವರೆಗೆ ಹಲವು ಸಾಧನೆ ಮೆರೆದ ಅನೇಕ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪುರುಷನಷ್ಟೇ ಸಮಾನಳಾಗಿ ಬೆಳೆದು ನಿಂತಿರುವ ಮಹಿಳೆ ಎಲ್ಲ ಕ್ಷೇತ್ರದಲ್ಲಿಯೂ ಮುಂದಿದ್ದಾಳೆ. ಮಹಿಳೆಯರು ತಮ್ಮ ಇಷ್ಟ ಕಾರ್ಯದಲ್ಲಿ ಭಾಗಿಯಾಗಬೇಕು. ಸಮಾಜ ಸೇವೆಯಲ್ಲಿ ಬೆರೆಯುವುದರಿಂದ ಆಂತರಿಕ ಖುಷಿ ಲಭಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಹಿಳೆಯರಿಂದ ವಿವಿಧ ವೇಷಭೂಷಣ ಸ್ಪರ್ಧೆ ನಡೆಯಿತು. ಜೆಎಸ್‌ಎಸ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಎಂ.ಆರ್.ಸವಿತಾ, ಧ್ವನಿ ಫೌಂಡೇಷನ್ ಸಂಸ್ಥಾಪಕಿ ಶ್ವೇತಾ ಮಡಪ್ಪಾಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net