ಜೆಟ್ ಏರ್​ವೇಸ್​ನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿಗೆ 7 ಲಕ್ಷ ರೂಪಾಯಿ ವಂಚನೆ

jet
Published on

ಬೆಂಗಳೂರು: ಜೆಟ್ ಏರ್​ವೇಸ್​ನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿದ ವಂಚಕರು ಯುವತಿಯಿಂದ 7.1 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ.

ಕೋರಮಂಗಲ 7ನೇ ಹಂತದ ನಿವಾಸಿ ನೇಹಾ ಮಿತ್ತಲ್ ವಂಚನೆಗೆ ಒಳಗಾದಾಕೆ. ಕಳೆದ ಏಪ್ರಿಲ್​ನಲ್ಲಿ ಮನೆ ಮಾಲೀಕ ಚಾಂದ್, ತನ್ನ ಸ್ನೇಹಿತನ ಮೂಲಕ ಜೆಟ್ ಏರ್​ವೇಸ್​ನಲ್ಲಿ ಕೆಲಸ ಕೊಡಿಸುವುದಾಗಿ ನೇಹಾಗೆ ಹೇಳಿದ್ದ.

ನಂತರ ನೇಹಾಗೆ ಅರ್ವನ್ ಎಂಬಾತನ ಮೊಬೈಲ್ ನಂಬರ್ ಕೊಟ್ಟು ಆತನನ್ನು ಪರಿಚಯಿಸಿದ್ದ. ಕೆಲಸದ ಭರವಸೆ ನೀಡಿದ ಅರ್ವನ್, ಯುವತಿಯಿಂದ ಬಯೋಡೇಟಾ ಪಡೆದು ಕೆಲ ದಿನಗಳ ಬಳಿಕ ಕೆಲಸ ಕೊಡಿಸಲು 7.10 ಲಕ್ಷ ರೂ. ಪಡೆದಿದ್ದ. ದೂರವಾಣಿ ಮೂಲಕವೇ ನೇಹಾಳ ಸಂದರ್ಶನ ನಡೆಸಿ ನಕಲಿ ನೇಮಕಾತಿ ಪತ್ರ ನೀಡಿದ್ದ. ಆ ಪತ್ರದೊಂದಿಗೆ ನೇಹಾ ಜೆಟ್ ಏರ್​ವೇಸ್ ಕಚೇರಿಗೆ ಹೋಗಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ವಂಚಕರು ಸಂಪರ್ಕಕ್ಕೆ ಸಿಗದಿದ್ದಾಗ ಕೋರಮಂಗಲ ಠಾಣೆಗೆ ದೂರು ನೀಡಿದ್ದಾರೆ. ಅರ್ವನ್, ಚಾಂದ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net