ಮಹಿಳಾ ಸಬಲೀಕರಣದ ಆಶಯಕ್ಕೆ ಕೈಜೋಡಿಸಿ: ಅಣ್ಣೂರು ಗ್ರಾಪಂ ಪಿಡಿಒ ಅಶ್ವಿನಿ ಮನವಿ

Women Friendly Gram Panchayat Campaign Mandya
Published on

ಕೆ.ಎಂ.ದೊಡ್ಡಿ: ಸ್ಥಳೀಯ ಆಡಳಿತದಲ್ಲಿ ಮಹಿಳೆಯರು ಭಾಗವಹಿಸಿ ಅಭಿಪ್ರಾಯ ನೀಡುವಾ ಮೂಲಕ ಸಬಲೀಕರಣದ ಆಶಯಕ್ಕೆ ಬಲ ತುಂಬಬೇಕು ಎಂದು ಅಣ್ಣೂರು ಗ್ರಾಮ ಪಂಚಾಯಿತಿ ಪಿಡಿಒ ಅಶ್ವಿನಿ ತಿಳಿಸಿದರು.

ಇಲ್ಲಿನ ಅಣ್ಣೂರು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನದಲ್ಲಿ ಮಾತನಾಡಿದ ಅವರು, ಮಹಿಳಾ ಸ್ನೇಹಿ ಗ್ರಾಪಂ ಅಭಿಯಾನ ಹದಿನಾರು ವಾರ ನಡೆಯಲಿದೆ. ವಿವಿಧ ದಿನಾಚರಣೆ ಹಾಗೂ ಆರೋಗ್ಯ ತಪಾಸಣೆ, ಯೋಗಾಸನ ಶಿಬಿರಗಳು ನಡೆಯಲಿದೆ. ಅಂತೆಯೇ ಸರ್ಕಾರದ ಯೋಜನೆ ಕುರಿತು ಮಾಹಿತಿ ನೀಡುವುದರ ಜತೆಗೆ ಆರ್ಹ ಫಲಾನುಭವಿಗಳಿಗೆ ತಕ್ಕ ಯೋಜನೆಯ ಫಲ ವಿತರಿಸಲು ಅಭಿಯಾನದಲ್ಲಿ ಕ್ರಮ ವಹಿಸಲಾಗುವುದು ಎಂದರು.

ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಇರುವ ತೊಡಕನ್ನು ಗುರುತಿಸುವುದರ ಜತೆಗೆ ಅದನ್ನು ಹೋಗಲಾಡಿಸುವ ಮೂಲಕ ವಾರ್ಡ್ ಮತ್ತು ಗ್ರಾಮಸಭೆಗಳಲ್ಲಿ ಅವರು ಪಾಲ್ಗೊಳ್ಳುವಂತೆ ಮಾಡಲು ಒತ್ತು ನೀಡಲಾಗುವುದು. ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ತಮ್ಮ ಅಭಿಪ್ರಾಯ ದಾಖಲಿಸಿದಾಗ ಮಾತ್ರ ಸಬಲೀಕರಣವಾಗಲಿದೆ. ಗ್ರಾಪಂನ ಉಪಸಮಿತಿಯಲ್ಲಿ ಶೇ.30ರಷ್ಟು ಮಹಿಳೆಯರಿಗೆ ಅವಕಾಶ ಇದ್ದು, ಇದರಿಂದ ನೇರವಾಗಿ ಮಹಿಳೆಯರು ಆಡಳಿತದಲ್ಲಿ ಪಾಲ್ಗೊಂಡು ತಮ್ಮ ಬೇಕು, ಬೇಡವನ್ನು ನಿರ್ಧರಿಸುವ ಅವಕಾಶ ಇದೆ. ಇದರ ಸದ್ಬಳಕೆ ಮಾಡಿಕ್ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಮಾತನಾಡಿ, ಮಹಿಳೆಯರು ಸಾಮಾಜಿಕ ಹಾಗೂ ರಾಜಕೀಯವಾಗಿಯೇ ಮುಂದೆ ಬರಬೇಕು. ಗ್ರಾಮಸಭೆಯ ಮೂಲಕ ಸರ್ಕಾರಿ ಕಾರ್ಯಕ್ರಮ ಜಾರಿಯಾಗುತ್ತವೆ. ಆದ್ದರಿಂದ ಗ್ರಾಮಸಭೆಯಲ್ಲಿ ಭಾಗವಹಿಸಿ ತಮ್ಮ ಬೇಡಿಕೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಜಾಗೃತರಾಗಿ ತಮ್ಮೊಳಗಿನ ಹಿಂಜರಿಕೆ ಬಿಟ್ಟು ಗ್ರಾಮಸಭೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಶಿವಮ್ಮ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮಹಿಳೆಯರಿಗೆ ಕೊಟ್ಟಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಅಭಿವೃದ್ದಿಗೆ ಸಹಕಾರಿಯಾಗೋಣ ಎಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಭಾಗ್ಯಮ್ಮ, ನಾಗಮಣಿ, ಸಿದ್ದೇಗೌಡ, ಸತೀಶ್, ಚಂದ್ರಶೇಖರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net